ಯುಪಿಎಗೆ ಬೆಂಬಲ ಕುರಿತು ಚಿಂತನೆ : ಯೆಚೂರಿ
ಕೊಲ್ಕತ್ತಾ, ಮೇ. 5 : ನಾಗರಿಕ ಪರಮಾಣು ಒಪ್ಪಂದ ವಿಷಯಕ್ಕೆ ಸಂಬಂಧಿಸಿದಂತೆ ಯುಪಿಎ ಹಾಗೂ ಎಡಪಕ್ಷಗಳ ನಡುವೆ ಉಂಟಾಗಿದ್ದ ಬಿನ್ನಾಭಿಪ್ರಾಯದಿಂದ ಎಡಪಕ್ಷಗಳು ಸರಕಾರದಿಂದ ದೂರ ಸರಿದಿದ್ದವು. ಚುನಾವಣೆಯಲ್ಲೂ ತೃತೀಯ ರಂಗ ರಚಿಸಿ ಎನ್ ಡಿಎ ಹಾಗೂ ಯುಪಿಎಗೆ ಪರ್ಯಾಯವಾಗಿ ನಿಂತಿದ್ದವು. ಈ ಬೆಳವಣಿಗೆ ನಂತರ ಇದೀಗ ಮತ್ತೆ ಎಡಪಕ್ಷಗಳು ಯುಪಿಎಯೊಂದಿಗೆ ಮೈತ್ರಿಯ ರಾಗ ಆರಂಭಿಸಿದ್ದು, ಫಲಿತಾಂಶದ ನಂತರ ಮೈತ್ರಿ ಕುರಿತು ಚಿಂತನೆ ನಡೆಸುವುದಾಗಿ ಸಿಪಿಎಂ ಮುಖಂಡ ಸೀತಾರಾಂ ಯೆಚೂರಿ ತಿಳಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ರಾಜಕೀಯ ಸನ್ನಿವೇಶ ಹೇಗೆ ನಿರ್ಮಾಣವಾಗಲಿದೆ ಎಂಬುದನ್ನು ಸದ್ಯ ತೀರ್ಮಾನಿಸಲು ಸಾಧ್ಯವಿಲ್ಲ ಎಂದರು. ಫಲಿತಾಂಶದ ನಂತರ ಮುಂದಿನ ಕ್ರಮಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಲಿದೆ. ಆದರೆ, ಸದ್ಯಕ್ಕೆ ನಾವುಗಳು ತೃತೀಯ ರಂಗದೊಂದಿಗೆ ಗುರುತಿಸಿಕೊಂಡಿದ್ದು, ಅದರಲ್ಲಿಯೇ ಮುಂದುವರೆಯುತ್ತೇವೆ. ಈವರೆಗೊ ಕಾಂಗ್ರೆಸ್ ಜೊತೆ ಮರುಮೈತ್ರಿ ಕುರಿತು ರಚಿಸುವ ವಿಷಯ ನಮ್ಮ ಮುಂದೆ ಇಲ್ಲ. ಒಂದು ವೇಳೆ ಅನಿವಾರ್ಯವಾದರೆ, ಎಡಪಕ್ಷಗಳು ಮುಖಂಡರೆಲ್ಲ ಚರ್ಚೆ ನಡೆಸಿ ಸೂಕ್ತ ತೀರ್ಮಾನಕ್ಕೆ ಬರುತ್ತೇವೆ ಎಂದು ಅವರ ಯೆಚೂರಿ ಹೇಳಿದರು.
ಫಲಿತಾಂಶದ ನಂತರ ಏನಾದರೂ ನಡೆಯಬಹುದು. ಒಟ್ಟಿನಲ್ಲಿ ಫಲಿತಾಂಶದ ಮೇಲೆ ಮೈತ್ರಿ ಸೇರಿದಂತೆ ಮತ್ತಿತರ ಒಡಂಬಡಿಕೆಗಳು ನಡೆಯಲಿವೆ ಎಂದು ಯೆಚೂರಿ ಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದರು. ಕಳೆದ ಕೆಲ ದಿನಗಳ ಹಿಂದೆ ಯೆಚೂರಿ ಕಾಂಗ್ರೆಸ್ ಜೊತೆ ಮೈತ್ರಿ ಅಸಾಧ್ಯ ಎಂದು ಸ್ಪಷ್ಟವಾಗಿ ಹೇಳಿದ್ದರು. ಇದೀಗ ಅವರ ಮಾತು ಬದಲಾಗಿದೆ.
(ಏಜನ್ಸೀಸ್)












Click it and Unblock the Notifications