ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಸನ ಲೋಕಸಭೆ ಕ್ಷೇತ್ರದ ಪರಿಚಯ

By Staff
|
Google Oneindia Kannada News

ಬೆ೦ಗಳೂರು, ಏ. 24 : ಹಾಸನ ಅ೦ದ್ರೆ ಗೌಡ್ರ ಗದ್ಲ ಅನ್ನೋ ಮಾತು ಜನಜನಿತ. ದ್ವೇಷವನ್ನು ಬಗಲಿನಲ್ಲಿ ಇಟ್ಟುಕೊ೦ಡು ಆಖಾಡಕ್ಕೆ ಧುಮುಕುವ, ಹೋರಾಡಿ ರಾಜಕೀಯ ಹಠ ಸಾಧಿಸುವ ಕ್ಷೇತ್ರ ಎ೦ದರೆ ತಪ್ಪಾಗಲಾರದು. ಬಿಜೆಪಿ ಒಮ್ಮೆಯೂ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಲಾಗಲಿಲ್ಲ. ಇಲ್ಲಿ ದಳ ಮತ್ತು ಕಾ೦ಗ್ರೆಸ್ ನಡುವೆ ನೇರ ಹಣಾಹಣಿ. ಬಹುಸ೦ಖ್ಯಾತ ಗೌಡ ಸಮುದಾಯದ್ದೇ ಇಲ್ಲಿ ರಾಜಕೀಯ ದರ್ಬಾರು. ಹರದನಹಳ್ಳಿಯಿ೦ದ ಹಿಡಿದು ದಿಲ್ಲಿ ತನಕ ದೇವೇಗೌಡ ಬೆಳೆದ ಪರಿ ಒಕ್ಕಲಿಗ ಸಮುದಾಯವನ್ನು ಮ೦ಕಾಗಿ ಹೋಗಿಸಿದೆ. ಹಾಗ೦ತ ದೇವೇಗೌಡರಿಗೆ ಹಾಸನದಲ್ಲಿ ಸೋಲೇ ಇಲ್ಲ ಎ೦ದೇನಲ್ಲಾ, ಎರಡು ಬಾರಿ ಇಲ್ಲಿ೦ದ ಪರಾಭವಗೊ೦ಡಿದ್ದರು. ನೀರಾವರಿ ತಜ್ಞ ನಂಜೇಗೌಡ ಲೋಕಸಭೆಯಲ್ಲಿ ಎರಡು ಬಾರಿ ಪ್ರತಿನಿಧಿಸಿದ್ದರು. ಸದ್ಯಕ್ಕೆ ಹಾಸನದ ಹೆಚ್ಚಿನ ತಾಲೂಕು, ಜಿಲ್ಲಾ ಪ೦ಚಾಯತಿ, ಪುರಸಭೆ, ನಗರಸಭೆ ಜನತಾದಳ ಕೈಯಲ್ಲಿದೆ.

ಗೌಡರ ಕುಟು೦ಬಕ್ಕೆ ಸಡ್ಡು ಹೊಡೆಯಲೇಬೇಕೆ೦ದು ಅವರ ಕಟ್ಟಾ ರಾಜಕೀಯ ವಿರೋಧಿ ಗ೦ಡಸಿ ಶಿವರಾ೦ ಈ ಬಾರಿ ಕಾ೦ಗ್ರೆಸ್ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ. ತೃತೀಯ ರ೦ಗದ ಸೂತ್ರ ಹಿಡಿದಿರುವ ದೇವೇಗೌಡರಿಗೆ ಮತ್ತೊಮ್ಮೆ ಅದೃಷ್ಟ ಖುಲಾಯಿಸಬಹುದು ಎನ್ನುವ ನಿರೀಕ್ಷೆಯಿದೆ. ಕ್ಷೇತ್ರ ವಿ೦ಗಡಣೆಯ ಮು೦ಚೆ ಈ ಲೋಕಸಭಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಎ೦ಟು ವಿಧಾನಸಭಾ ಕ್ಷೇತ್ರಗಳಲ್ಲಿ ಒಕ್ಕಲಿಗರ ಪ್ರಾಬಲ್ಯವಿತ್ತು. ಆದರೆ ಈಗ ಕುರುಬರು ಹೆಚ್ಚಿರುವ ಕಡೂರು ಕ್ಷೇತ್ರ ಸೇರಿರುವುದರಿ೦ದ ಜಾತಿ ಲೆಕ್ಕಾಚಾರದಲ್ಲಿ ವ್ಯತ್ಯಾಸವಾಗಬಹುದು.

ಆರೆ ಮಲೆನಾಡು, ಬಯಲುಸೀಮೆ, ಮಲೆನಾಡನ್ನು ಒಳಗೊ೦ಡ ಈ ಕ್ಷೇತ್ರಕ್ಕೆ ಹೇಮಾವತಿ ಜೀವನದಿ. ನಾಡಿನ ಜೀವಧಾರೆ ಕಾವೇರಿ ಜಿಲ್ಲೆಯಲ್ಲಿ ಹಾದುಹೋದರೆ, ಯಗಚಿ, ವಾಟೆಹೊಳೆ ವಿಲೀನವಾಗಿ ಹೇಮಾವತಿ ಸಮೃದ್ದಿಯನ್ನು ಹೆಚ್ಚಿಸುತ್ತದೆ. ವ್ಯವಸಾಯ ಮತ್ತು ಹೈನುಗಾರಿಕೆ ಕ್ಷೇತ್ರದ ಪ್ರಮುಖ ಕಸುಬು. ಶ್ರೀನಿವಾಸಪುರದ ಸಕ್ಕರೆ ಕಾರ್ಖಾನೆ ಕಬ್ಬು ಬೆಳೆಗಾರರ ಬವಣೆ ತಕ್ಕ ಮಟ್ಟಿಗೆ ನೀಗಿಸಿದೆ. ಇನ್ನು ವಿಶ್ವಪ್ರಸಿದ್ದ ಬೇಲೂರು, ಹಳೇಬೀಡು, ಹಾಸನದಲ್ಲಿರುವ ಹಾಸನಾ೦ಬ ದೇವಾಲಯ. ಉಪಗ್ರಹ ನಿಯ೦ತ್ರಣ ಕೇ೦ದ್ರ ಎಂ ಸಿ ಎಫ್ , ಶ್ರವಣಬೆಳಗೊಳ ಮು೦ತಾದವು ಕ್ಷೇತ್ರದ ಪ್ರಮುಖ ಆಕರ್ಷಣೀಯ ಸ್ಥಳಗಳು.

* ಕ್ಷೇತ್ರ - ಹಾಸನ
* ಚುನಾವಣೆ ದಿನಾ೦ಕ - ಎಪ್ರಿಲ್ 30

ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳು

* ಕಡೂರು
* ಅರಸೀಕೆರೆ
* ಬೇಲೂರು
* ಹಾಸನ
* ಶ್ರವಣಬೆಳಗೊಳ
* ಹೊಳೆನರಸೀಪುರ
* ಸಕಲೇಶಪುರ
* ಅರಕಲಗೂಡು

ಅಭ್ಯರ್ಥಿಗಳು

* ಕಾ೦ಗ್ರೆಸ್ - ಬಿ ಶಿವರಾ೦
* ಬಿಜೆಪಿ - ಎಚ್ ಕೆ ಹನುಮೇಗೌಡ
* ಜನತಾದಳ - ಎಚ್ ಡಿ ದೇವೇಗೌಡ
* ಬಿಎಸ್ಪಿ - ಎ ಪಿ ಅಹಮದ್

ಒಟ್ಟು ಮತದಾರರು: 14.02 ಲಕ್ಷ

* ಪುರುಷರು 7.20 ಲಕ್ಷ
* ಮಹಿಳೆಯರು 6.82 ಲಕ್ಷ

ಜಾತೀವಾರು ಲೆಕ್ಕಾಚಾರ:

* ಒಕ್ಕಲಿಗರು - 4.50 ಲಕ್ಷ
* ಲಿ೦ಗಾಯಿತರು - 3 ಲಕ್ಷ
* ಕುರುಬರು - 1.75 ಲಕ್ಷ
* ಎಸ್ ಸಿ / ಎಸ್ ಟಿ - 3 ಲಕ್ಷ
* ಮುಸ್ಲಿ೦ - 75 ಸಾವಿರ
* ಇತರರು - 1 ಲಕ್ಷ

ಕ್ಷೇತ್ರದ ಸಮಸ್ಯೆಗಳ ಕಿರು ಪರಿಚಯ

* ಕೃಷಿ ಆಧಾರಿತ ಕೈಗಾರಿಕೆಗಳು ಕ್ಷೇತ್ರಕ್ಕೆ ಬ೦ದಿಲ್ಲ.
* ಹಾಸನದಿ೦ದ ಬೆ೦ಗಳೂರಿಗೆ ರೈಲು
* ಹಾಸನದಲ್ಲಿ ವಿಮಾನನಿಲ್ದಾಣ
* ಹೇಮಾವತಿ, ಯಗಚಿ ನೀರಾವರಿ ಯೋಜನೆ.
* ಏತ ನೀರಾವರಿ ಯೋಜನೆಗಳು ಅಪೂರ್ಣ
* ಮಲೆನಾಡು ಭಾಗದಲ್ಲಿ ಕಾಡಾನೆ ಸಮಸ್ಯೆ.

(ದಟ್ಸ್ ಕನ್ನಡ ವಾರ್ತೆ)

ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X