ಮತ್ತೊಬ್ಬ ರೌಡಿ ' ಪರಂಧಾಮ' ಮಟಾಶ್
ಬೆಂಗಳೂರು, ಏ. 6 : ಎರಡು ದಿನಗಳ ಹಿಂದೆ ಬೆಂಗಳೂರಿನ ಇಟ್ಟುಮಡಗು ನಿವಾಸಿ ಬಿಜೆಪಿ ಕಾರ್ಯಕರ್ತ ಚಂದ್ರಶೇಖರ್ ಬಾಬು ಅವರನ್ನು ಬರ್ಬರ ಹತ್ಯೆ ಮಾಡಿದ್ದ ಪ್ರಮುಖ ಆರೋಪಿ ಎನ್ನಲಾದ ರೌಡಿ 'ಪರಂಧಾಮ' ಇಂದು ಬೆಳಿಗ್ಗೆ ಪೋಲಿಸ್ ಏನ್ ಕೌಂಟರ್ ಗೆ ಬಲಿಯಾಗಿದ್ದಾನೆ. ಮೂಲತಃ ತಮಿಳುನಾಡು ಮೂಲದ ಪರಂಧಾಮ (30) ಇಂದು ಬೆಳಿಗ್ಗೆ ಪರಪ್ಪನ ಅಗ್ರಹಾರ ಪ್ರದೇಶದಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾಗಿರುವುದಾಗಿ ಪೋಲಿಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಶನಿವಾರ ಲಾಲ್ ಬಾಗ್ ಬಳಿ ಚಂದ್ರಶೇಖರ್ ಬಾಬು ಅವರ ಹತ್ಯೆಯ ನಂತರ ಆರೋಪಿ ಪರಂಧಾಮನ ಚಲನವಲದ ಮೇಲೆ ಹದ್ದಿನ ಕಣ್ಣಿಟ್ಟಿದ್ದ ಸಿಸಿಬಿ ಪೊಲೀಸರು ಇಂದು ಬೆಳಗಿನ ಜಾವ ಆತ ಕೋರಮಂಗಲದಲ್ಲಿರುವುದನ್ನು ಖಚಿತ ಪಡಿಸಿಕೊಂಡು ಸೆರೆ ಹಿಡಿಯಲು ಪ್ರಯತ್ನಿಸಿದಾಗ ಪರಂಧಾಮ ಅಲ್ಲಿಂದ ತಪ್ಪಿಸಿಕೊಂಡ. ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿದ್ದ ಸಿಸಿಬಿ ಪೊಲೀಸರು ಪರಪ್ಪನ ಅಗ್ರಹಾರದ ಬಳಿ ಎನ್ ಕೌಂಟರ್ ನಡೆಸಿ ಪರಂಧಾಮನ ರೌಡಿ ಜೀವನಕ್ಕೆ ಮಂಗಳ ಹಾಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತನ ಬರ್ಬರ ಕೊಲೆ












Click it and Unblock the Notifications