ಗಣಿ ಅವ್ಯವಹಾರದಲ್ಲಿ ಸಿಎಂ ಪಾಲಿದೆ, ದಿವಾಕರ್ ಬಾಬು
ಬಳ್ಳಾರಿ, ಫೆ. 4 : ಲೋಕಾಯುಕ್ತ ಇಲಾಖೆ ನೀಡಿರುವ ಗಣಿ ಅವ್ಯವಹಾರದ ವರದಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪಾಲಿದೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಎಂ ದಿವಾಕರ್ ಬಾಬು ಆರೋಪಿಸಿದರು. ಪ್ರವಾಸೋಧ್ಯಮ ಸಚಿವ ಜನಾರ್ದನರೆಡ್ಡಿ ಹಿಟ್ಲರ್ ರೀತಿಯಲ್ಲಿ ವರ್ತಿಸುತ್ತಿದ್ದು, ವರದಿ ಆಧಾರಿಸಿ ರೆಡ್ಡಿ ವಿರುದ್ಧ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡುತ್ತಿದ್ದರು. ಲೋಕಾಯುಕ್ತರು ನೀಡಿರುವ ಗಣಿ ಅವ್ಯವಹಾರದ ವರದಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ಸರ್ಕಾರ ಹಿಂದೇಟು ಹಾಕುತ್ತಿರುವುದಕ್ಕೆ ಅನೇಕ ಸಂಶಯಗಳಿಗೆ ಕಾರಣವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದಲ್ಲಿರುವ ಸಚಿವರು ಗಣಿ ಅವ್ಯವಹಾರದಲ್ಲಿ ಪಾಲ್ಗೊಂಡಿರುವುದು ವಿಶೇಷ ಸಂಗತಿಯೇನಲ್ಲ ಎಂದು ಟೀಕಿಸಿದರು.
ಗಣಿ ಅವ್ಯವಹಾರದಲ್ಲಿ ಪ್ರವಾಸೋಧ್ಯಮ ಸಚಿವ ಜನಾರ್ದನರೆಡ್ಡಿ ಹೆಸರಿದೆ. ಇಷ್ಟಾದರೂ ಕೂಡ ಸಚಿವರು ಹಿಟ್ಲರ್ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಲೋಕಾಯುಕ್ತರು ನೀಡಿರುವ ವರದಿ ಪ್ರಕಾರ ಕ್ರಮಕೈಗೊಳ್ಳಲು ಮೀನಮೇಷ ಎಣಿಸುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ದಿವಾಕರ್ ಬಾಬು, ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಈ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎಂದರು.
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ:
ಗಣಿ ವಿವಾದ: ದಿವಾಕರ್ ಬಾಬು ಮೇಲೆ ಲಾಠಿ ಪ್ರಹಾರ
ಗಣಿಗಾಗಿ ರಾಜ್ಯದ ನಕ್ಷೆ ತಿರುಚಿಲ್ಲ : ಜನಾರ್ದನರೆಡ್ಡಿ












Click it and Unblock the Notifications