ಭಯೋತ್ಪಾದನೆಯೇ ಚುನಾವಣಾ ಅಸ್ತ್ರ: ಮೋದಿ
ಗಾಂಧಿನಗರ, ಜ. 2 : ಮುಂಬರುವ ಲೋಕಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಭಯೋತ್ಪಾದನೆಯನ್ನು ತನ್ನ ಚುನಾವಣಾ ಅಸ್ತ್ರವನ್ನಾಗಿ ಪ್ರಯೋಗಿಸುವ ಇಂಗಿತವನ್ನು ವ್ಯಕ್ತಪಡಿಸಿದೆ. ಬಿಜೆಪಿ ಸ್ಟಾರ್ ನಾಯಕ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.
ಕಳೆದ ವರ್ಷ ನವೆಂಬರ್ 26 ರಂದು ಪಾಕಿಸ್ತಾನದ ಕೃಪಾಪೋಷಿತ ಉಗ್ರರ ತಂಡ ಮುಂಬೈನಲ್ಲಿ ನಡೆಸಿದ ಮಾರಣಹೋಮ ಹಾಗೂ ಆನಂತರ ಬೆಳವಣಿಗೆ, ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ವರ್ತನೆ, ಉಗ್ರರೆಡೆಗಿನ ಸರ್ಕಾರದ ಮೃದುಧೋರಣೆ ಸೇರಿ ಅನೇಕ ವಿಷಯಗಳನ್ನು ಚುನಾವಣೆಯಲ್ಲಿ ಅಸ್ತ್ರವನ್ನಾಗಿ ಬಳಸಿಕೊಳ್ಳಲಾಗುವುದು. ಹಾಗೂ ಮುಂಬೈ ಭಯೋತ್ಪಾದನೆ ನಡೆದ ನಂತರವೂ ಕೇಂದ್ರ ಸರ್ಕಾರ ದೇಶದ ಗಡಿಪ್ರದೇಶದಲ್ಲಿ ಸೂಕ್ತ ಭದ್ರತೆ ನಿಯೋಜಿಸುವಲ್ಲಿ ವಿಫಲವಾಗಿವೆ ಎಂದು ಮೋದಿ ಕಿಡಿಕಾರಿದರು.
ಮುಂಬೈ ದಾಳಿಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ತನಿಖಾ ದಳದಂತಹ ಭಯೋತ್ಪಾದಕ ನಿಗ್ರಹ ಕಾನೂನುನನ್ನು ಜಾರಿಗೆ ತಂದಿದೆಯಾದರೂ ಅದು ಇಂದಿನ ತಾಂತ್ರಿಕ ಭಯೋತ್ಪಾದನೆಯ ವಿರುದ್ಧ ಹೋರಾಟ ಮಾಡುವಷ್ಟು ಶಕ್ತಿ ಹೊಂದಿಲ್ಲ. ಆದ್ದರಿಂದ ನೂತನವಾಗಿ ಜಾರಿಗೆ ತರಲಾಗಿರುವ ಕಾನೂನನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಬೇಕಾಗಿದೆ ಎಂದು ಅವರು ಒತ್ತಾಯಿಸಿದರು.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನಿಚ್ಚಳ ಬಹುಮತ ಪಡೆದು ದೇಶದ ಅಧಿಕಾರ ಚುಕ್ಕಾಣಿ ಹಿಡಿಯಲಿದೆ. ಮಿನಿ ಮಹಾಸಮರವೆಂದೇ ಕರೆಯಲಾಗಿದ್ದ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಆಯ್ಕೆಯಾದ ಶಾಸಕರ ಸಂಖ್ಯೆಗಳನ್ನು ಗಣನೆಗೆ ತೆಗೆದುಕೊಂಡರೆ ಬಿಜೆಪಿ ಅತಿ ಹೆಚ್ಚು ಸ್ಥಾನ ಗಳಿಸಿರುವುದು ಸ್ಪಷ್ಟವಾಗುತ್ತದೆ. ಒಟ್ಟು 600 ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ 294, ಕಾಂಗ್ರೆಸ್ 274 ಸ್ಥಾನಗಳನ್ನು ಪಡೆದುಕೊಂಡಿದೆ ಎಂದು ನರೇಂದ್ರ ಮೋದಿ ವಿವರಿಸಿದರು.
ಆದರೆ ಒಂದು ಸಂಗತಿ ಎಂದರೆ ಮಿನಿ ಮಹಾಸಮರ ಎನ್ನಲಾಗಿದ್ದ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭಯೋತ್ಪಾದನೆ ಅಸ್ತ್ರವನ್ನೇ ಕೈಗೆತ್ತಿಕೊಂಡು ಕಣಕ್ಕಿಳಿಯಿತು, ಆದರೆ ಮತದಾರರ ಇವರನ್ನು ತಿರಸ್ಕರಿಸಿರುವುದು ಜಗತ್ತಿಗೆ ಗೊತ್ತಿದೆ. ಆದ್ದರಿಂದ ಬೇರೆ ಬಿಜೆಪಿ ಬೇರೊಂದು ಅಸ್ತ್ರವನ್ನು ಹುಡುಕಿಕೊಳ್ಳಬೇಕು ಎಂದು ರಾಜಕೀಯ ವಿಶ್ಲೇಷಕರ ಮಾತಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications