ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ಉಪಚುನಾವಣೆಯಲ್ಲಿ ಶೇ.67ರಷ್ಟು ಮತದಾನ

By Staff
|
Google Oneindia Kannada News

ಬೆಂಗಳೂರು, ಡಿ. 27 : ಮಧುಗಿರಿಯಲ್ಲಿ ಕುಮಾರಸ್ವಾಮಿ ಕ್ಷೇತ್ರ ಪ್ರವೇಶ, ಜಮೀರ್ ಮತ್ತು ರಾಜಣ್ಣ ನಡುವಿನ ಜಟಾಪಟಿ, ತುರುವೇಕೆರೆಯಲ್ಲಿ ಜೆಡಿಎಸ್ ಕಾರ್ಯಕರ್ತರಿಂದ ದಾಂಧಲೆ, ಚಿಕ್ಕಬಳ್ಳಾಪುರದಲ್ಲಿ ಸಿಕ್ಕ ನೋಟಿನ ಹಾಳೆಗಳು, ದೊಡ್ಡಬಳ್ಳಾಪುರದಲ್ಲಿ ಜೇನ್ನೊಣಗಳ ಹಾವಳಿ, ಹುಕ್ಕೇರಿಯಲ್ಲಿ ನೋಟು ಕೊಟ್ರೆ ಮಾತ್ರ ಓಟು ಎಂಬ ಮತದೊರೆಯ ಬೇಡಿಕೆ ಹೊರತುಪಡಿಸಿದರೆ ರಾಜ್ಯದ ಎಂಟು ಕ್ಷೇತ್ರಗಳಲ್ಲಿ ನಡೆದ ಉಪ ಚುನಾವಣೆ ಶಾಂತರೀತಿಯಲ್ಲಿ ಜರುಗಿದೆ.

ಬೆಳಿಗ್ಗೆ 7ರಿಂದ ನಿಧಾನವಾಗಿ ಪ್ರಾರಂಭವಾದ ಮತದಾನ ಮಧ್ಯಾಹ್ನ ದಾಟುತ್ತಿದ್ದಂತೆ ಚುರುಕಾಗಿ ನಡೆದಿದೆ. ಒಟ್ಟಾರೆ ಶೇ. 67ರಷ್ಟು ಮತಚಲಾವಣೆಯಾಗಿದೆ. ಅತಿ ಹೆಚ್ಚು ಮತದಾನ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಕ್ಷೇತ್ರ ಮದ್ದೂರಿನಲ್ಲಿ ಮತ್ತು ಉಮೇಶ್ ಕತ್ತಿ ಸ್ಪರ್ಧಿಸಿರುವ ಹುಕ್ಕೇರಿಯಲ್ಲಿ ಆಗಿದೆ. ಎರಡೂ ಕ್ಷೇತ್ರಗಳಲ್ಲಿ ಮತದಾರರು ಉತ್ಸಾಹದಿಂದ ಮತ ಚಲಾಯಿಸಿದ್ದು ಶೇ. 76ರಷ್ಟು ಮತದಾನವಾಗಿದೆ. ಅತಿ ಕಡಿಮೆ ಶೇ. 48ರಷ್ಟು ಮತದಾನ ದೇವದುರ್ಗದಲ್ಲಿ ನಡೆದಿದೆ. ಅರಬಾವಿಯಲ್ಲಿ ಶೇ.74, ಕಾರವಾರದಲ್ಲಿ ಶೇ. 63, ಮಧುಗಿರಿಯಲ್ಲಿ ಶೇ. 65, ತುರುವೇಕೆರೆಯಲ್ಲಿ ಶೇ. 67 ಮತ್ತು ದೊಡ್ಡಬಳ್ಳಾಪುರದಲ್ಲಿ ಶೇ. 70ರಷ್ಟು ಮತದಾನವಾಗಿದೆ. ಮಧುಗಿರಿ, ಮದ್ದೂರು, ತುರುವೇಕೆರೆ, ದೊಡ್ಡಬಳ್ಳಾಪುರ, ಅರಬಾವಿ, ದೇವದುರ್ಗ, ಕಾರವಾರ ಮತ್ತು ಹುಕ್ಕೇರಿ ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದು, 73 ಅಭ್ಯರ್ಥಿಗಳು ಕಣದಲ್ಲಿದ್ದರು.

ವೈಯಕ್ತಿಕ ವರ್ಚಸ್ಸು, ಜಾತಿ-ಜನಾಂಗದ ಬಲ, ಆಪರೇಷನ್ ಕಮಲದಿಂದ ಉದ್ಭವಿಸಿರುವ ಅನುಕಂಪದ ಅಲೆ, ಅಭಿವೃದ್ಧಿ ಮಂತ್ರ, ತಂತ್ರ-ಕುತಂತ್ರ ಯಾವುದಕ್ಕೂ, ಯಾವ ಪಕ್ಷವೂ, ಯಾವ ರಾಜಕಾರಣಿಯೂ ಬೆಲೆ ನೀಡಲು ಹೋಗಿಲ್ಲವೆನ್ನುವುದು ಈ ಚುನಾವಣೆಯಲ್ಲಿ ಸಾಬೀತಾಗಿದೆ. ಹಣದ, ಹೆಂಡದ ಮುಂದೆ ಉಳಿದಿದ್ದೆಲ್ಲವೂ ಗೌಣವಾಗಿದೆ ಎಂಬುದಕ್ಕೆ ಈ ಚುನಾವಣೆ ಸಾಕ್ಷಿಯಾಗಿದೆ. ನೀತಿ ಸಂಹಿತೆ ಜಾರಿಗೆ ಬಂದ ನಂತರವೂ ಹಣ ತೂರಾಡಿದೆ, ಹೆಂಡದ ಹೊಳೆಯಲ್ಲಿ ಜನ ತೇಲಾಡಿದ್ದಾರೆ. ಕೆಲ ಕ್ಷೇತ್ರದಲ್ಲಿ ನೋಟು ನೀಡಿದರೆ ಮಾತ್ರ ಓಟು ಎಂದು ಮತದಾರರು ತಾಕೀತು ಮಾಡಿದ ಘಟನೆಯೂ ಜರುಗಿದೆ.

ಜನ ಹಣದ ಮಂತ್ರಕ್ಕೆ ಬೆಲೆ ನೀಡಲಿದ್ದಾರೆ, ಪ್ರಜಾತಂತ್ರಕ್ಕೆ ತಲೆಬಾಗಲಿದ್ದಾರೋ ಡಿಸೆಂಬರ್ 30ರಂದು ನಡೆಯುವ ಮತಎಣಿಕೆಯಲ್ಲಿ ಗೊತ್ತಾಗಲಿದೆ. ಎಲ್ಲ ಕ್ಷೇತ್ರಗಳಲ್ಲಿ ಎಲೆಕ್ಟ್ರಾನಿಕ್ ಮತಯಂತ್ರದಲ್ಲಿ ನಡೆದಿರುವುದರಿಂದ ಮಧ್ಯಾಹ್ನದ ಹೊತ್ತಿಗೆ ಎಲ್ಲ ಫಲಿತಾಂಶ ಸಿಗುವ ನಿರೀಕ್ಷೆಯಿದೆ.

ಕುಮಾರಸ್ವಾಮಿ ವಿರುದ್ಧ ಬಿಜೆಪಿ ದೂರು : ನೀತಿ ಸಂಹಿತೆ ಉಲ್ಲಂಘಿಸಿ ಅನಿತಾ ಕುಮಾರಸ್ವಾಮಿ ಸ್ಪರ್ಧಿಸಿರುವ ಮಧುಗಿರಿ ಕ್ಷೇತ್ರದಲ್ಲಿ ಕಾಲಿರಿಸಿದ್ದನ್ನು ವಿರೋಧಿಸಿ ಬಿಜೆಪಿ ಚುನಾವಣಾಧಿಕಾರಿಗೆ ದೂರು ನೀಡಿದೆ. ನೀತಿ ಉಲ್ಲಂಘಿಸಿದ ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ. ರೇವಣ್ಣ ಅವರನ್ನು ಬಂಧಿಸುವಂತೆ ಕೋರಿಕೊಂಡಿದೆ. ಈ ಘಟನೆಯಲ್ಲಿ ಜೆಡಿಎಸ್ ಗೆ ಸೇರಿದ ಎರಡು ವಾಹನ ಮತ್ತು 15 ಕಾರ್ಯಕರ್ತರನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ಕೃಷ್ಣ ಉವಾಚ : ಪ್ರಸ್ತುತ ನಡೆದಿರುವ ಉಪ ಚುನಾವಣೆಯ ಫಲಿತಾಂಶ ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಆದರೆ, ರಾಜ್ಯದ ರಾಜಕೀಯ ಸನ್ನಿವೇಶವನ್ನು ಬದಲಾಯಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅತಿ ಹೆಚ್ಚು ಮತದಾನವಾಗಿರುವ ಮದ್ದೂರಿನ ಸೋಮನಹಳ್ಳಿಯಲ್ಲಿ ಅವರು ಇಂದು ಮತ ಚಲಾಯಿಸಿದರು. ಉಪಚುನಾವಣೆಯ ನಂತರ ಕಾಂಗ್ರೆಸ್ ಇಬ್ಭಾಗವಾಗಲಿದೆ ಎಂಬ ಬಿಜೆಪಿಯ ಹೇಳಿಕೆಯನ್ನು ಕೃಷ್ಣ ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಕಾಂಚಾಣದ ಕುಣಿತ : ರಾಜನಘಟ್ಟ ಎಂಬಲ್ಲಿ ಜನರಿಗೆ ಹಂಚಲಾಗುತ್ತಿದ್ದ ಒಂದೂವರೆ ಲಕ್ಷ ರು. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಕುಮಾರೇಗೌಡ, ಸುರೇಶ ಮತ್ತು ಮಂಜೇಗೌಡ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಅವರಿಂದ ಸ್ಯಾಂಟ್ರೋ ಕಾರನ್ನು ವಶಪಡಿಸಿಕೊಂಡಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X