ಮತದಾನಕ್ಕೆ ಹುಕ್ಕೇರಿ ಅರಭಾವಿ ಸಜ್ಜು
ಬೆಳಗಾವಿ, ಡಿ. 25:ಇದೇ ಡಿಸೆಂಬರ್ 27 ರಂದು ನಡೆಯಲಿರುವ ಹುಕ್ಕೇರಿ ಮತ್ತು ಅರಭಾವಿ ವಿಧಾನಸಭಾ ಕ್ಷೇತ್ರಗಳ ಚುನಾವಣೆಯು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸಲು ಅನುಕೂಲವಾಗುವಂತೆ ಜಿಲ್ಲಾಡಳಿತ ಎಲ್ಲ ಕ್ರಮಗಳನ್ನು ಕೈಗೊಂಡಿದೆ.
ಜಿಲ್ಲಾ ಚುನಾವಣಾಧಿಕಾರಿ ಡಾ. ಜೆ. ರವಿಶಂಕರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ. ಸೋನಿಯಾ ನಾರಂಗ ಅವರು ಸುದ್ದಿಗಾರರಿಗೆ ಈ ವಿಷಯವನ್ನು ತಿಳಿಸುತ್ತ ಸಾರ್ವಜನಿಕರು ಚುನಾವಣಾ ಆಯೋಗ ನೀಡಿರುವ ಮತದಾರರ ಗುರುತಿನ ಚೀಟಿ ಅಥವಾ ಇತರೆ 20 ಅವಶ್ಯಕ ದಾಖಲೆಗಳಲ್ಲಿ ಒಂದನ್ನು ಮತದಾನದ ಕಾಲಕ್ಕೆ ತರುವಂತೆ ಮನವಿ ಮಾಡಿದರು.
ಈ ಎರಡೂ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಒಟ್ಟು 58 ಸೆಕ್ಟರ್ ಅಧಿಕಾರಿಗಳನ್ನು, 58 ಇವಿಎಮ್ ಮಾಸ್ಟರ್ ತರಬೇತಿದಾರರನ್ನು,23 ಮೈಕ್ರೋ ವೀಕ್ಷಕರನ್ನು, 1568 ಮತದಾನ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಚುನಾವಣೆಯು ಮುಕ್ತ ಹಾಗೂ ನಿಷ್ಪಕ್ಷಪಾತವಾಗಿ ನಡೆಯಲು ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು 4 ಜನ ಸೆಕ್ಟರ್ ಮ್ಯಾಜಿಸ್ಟ್ರೇಟ್‌ರನ್ನು ನೇಮಕ ಮಾಡಲಾಗಿದೆ.
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಕುರಿತಂತೆ ಎರಡೂ ಕ್ಷೇತ್ರಗಳಲ್ಲಿ ಒಟ್ಟು 14 ಪ್ರಕರಣಗಳು ದಾಖಲಾಗಿವೆ. ಈ ಕುರಿತು ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಚುನಾವಣಾದಿಕಾರಿಗಳಾದ ಡಾ. ಜೆ. ರವಿಶಂಕರ ತಿಳಿಸಿದರು. ಚುನಾವಣೆಯು ಶಾಂತಿಯುತವಾಗಿ ನಡೆಸಲು ಅನುಕೂಲವಾಗುವಂತೆ ಪ್ರತಿಯೊಂದು ಮತಗಟ್ಟೆಗೆ ಇಬ್ಬರು ಹೆಡ್‌ಕಾನ್‌ಸ್ಟೇಬಲ್, ಮೂವರು ಪೊಲೀಸ್ ಕಾನ್‌ಸ್ಟೇಬಲ್ ಮತ್ತು ಒಬ್ಬರು ಗೃಹರಕ್ಷಕದಳದ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀಮತಿ. ಸೋನಿಯಾ ನಾರಂಗ ತಿಳಿಸಿದರು.
( ದಟ್ಸ್ ಕನ್ನಡ ವಾರ್ತೆ)











Click it and Unblock the Notifications