ಅಂತುಳೆ ಹೇಳಿಕೆಗೆ ಸ್ಪಷ್ಟೀಕರಣ ನೀಡಿ:ಬಿಜೆಪಿ
ನವದೆಹಲಿ, ಡಿ. 18 : ಕೇಂದ್ರ ಸಚಿವ ಎ ಆರ್ ಅಂತುಳೆ ಅವರು ಎಟಿಎಸ್ ಮುಖ್ಯಸ್ಥರಾಗಿದ್ದ ಹೇಮಂತ್ ಕರ್ಕರೆ ಸಾವಿನ ಕುರಿತು ನೀಡಿರುವ ವಿವಾದಾತ್ಮಕ ಹೇಳಿಕೆಗೆ ಪ್ರತಿಪಕ್ಷ ಬಿಜೆಪಿ ಸಂಸದರು ಇಂದು ಸಂಸತ್ತಿನಲ್ಲಿ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಅಂತುಳೆ ವಿರುದ್ಧ ಘೋಷಣೆ ಕೂಗಿದರಲ್ಲದೇ, ಈ ಬಗ್ಗೆ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಕೂಡಲೇ ಸ್ಪಷ್ಟೀಕರಣ ನೀಡಬೇಕು ಎಂದು ಪಟ್ಟು ಹಿಡಿದು ತೀವ್ರವಾಗಿ ಒತ್ತಾಯಿಸಿದರು.
ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ ಅಂತುಳೆ, ಮಾಲೇಗಾಂವ್ ಸ್ಫೋಟ ಘಟನೆಗೂ ಹಾಗೂ ಮುಂಬೈ ಭಯೋತ್ಪಾದನೆಗೂ ತಳಕು ಹಾಕಿ ಹಿಂದು ಸಂಘಚಟನೆಗಳು ಕರ್ಕರೆ ಅವರನ್ನು ಕೊಂದಿರಬಹುದು ಎನ್ನುವ ಅರ್ಥದಲ್ಲಿ ವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದರು. ಇದು ವ್ಯಾಪಕ ಟೀಕೆ, ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೇ ಇಂತಹ ಗುರುತರವಾದ ಆರೋಪ ಮಾಡುವ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿರುವ ಅಂತುಳೆ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ನೋಟಿಸ್ ನೀಡಿ ಕೂಡಲೇ ಹೇಳಿಕೆಗೆ ಕಾರಣ ನೀಡುವಂತೆ ಸೂಚನೆ ನೀಡಿದೆ.
ಇಂದು ಸಂಸತ್ತಿನಲ್ಲಿ ಅಂತುಳೆ ಅವರ ಹೇಳಿಕೆಯೇ ಕಾರುಬಾರು ನಡೆಸಿತು.ಯಾವ ಆಧಾರದ ಮೇಲೆ ಅಂತುಳೆ ಅವರು ಇಂತಹ ಆರೋಪ ಮಾಡಿದರು. ಇದು ದೇಶದ ಸಾರ್ವಭೌಮತೆಗೆ ದಕ್ಕೆ ತರುವ ಹೇಳಿಕೆಯಾಗಿದೆ. ಇದರಲ್ಲಿ ಯಾವುದೋ ಕಾಣದ ಕೈಗಳು ಕೆಲಸ ಮಾಡಿವೆ. ಇದನ್ನು ಸೂಕ್ತ ತನಿಖೆಗೆ ಒಳಪಡಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಬಿಜೆಪಿ ಸಂಸದರು ಆಗ್ರಹಿಸಿದರು. ಈ ಕೂಡಲೇ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅಂತುಳೆ ಹೇಳಿಕೆಗೆ ಕಾರಣ ನೀಡಬೇಕು ಎಂದು ಬಿಜೆಪಿ ವಕ್ತಾರ ರಾಜೀವ್ ಪ್ರತಾಪ್ ರೂಡಿ ಒತ್ತಾಯಿಸಿದರು.
ಕಳೆದ ತಿಂಗಳು 26 ರಂದು ಮುಂಬೈನಲ್ಲಿ ನಡೆದ ಭಯೋತ್ಪಾದನೆಯಲ್ಲಿ ಉಗ್ರರ ವಿರುದ್ಧ ಕಾದಾಟದಲ್ಲಿ ಮಹಾರಾಷ್ಟ್ರ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ, ಇನ್ಸ್ ಪೆಕ್ಟರ್ ವಿಜಯ್ ಸಲಸ್ಕರ್, ಎಸಿಪಿ ಅಶೋಕ್ ಕಾಮ್ಟೆ ವೀರಮರಣ ಹೊಂದಿದ್ದರು. ಮಾಲೇಗಾಂವ್ ಸ್ಫೋಟಕ್ಕೆ ಸಂಬಂಧಿಸಿದಂತೆ ಕರ್ಕರೆ, ಸಾಧ್ವಿ ಪ್ರಗ್ಯಾಸಿಂಗ್ ಠಾಕೂರ್, ಸೇನಾಧಿಕಾರಿ ಶ್ರೀಕಾಂತ್ ಪುರೋಹಿತ್ ಹಾಗೂ ದಯಾನಂದ ಸ್ವಾಮೀಜಿ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು.
(ದಟ್ಸ್ ಕನ್ನಡ ವಾರ್ತೆ)
ಸಚಿವ ಅಂತುಳೆ ವಿರುದ್ಧ ಕಾಂಗ್ರೆಸ್ ಕೆಂಗಣ್ಣು












Click it and Unblock the Notifications