ರೈತರ ಆತ್ಮಹತ್ಯೆ: ಬೆಚ್ಚಿಬೀಳಿಸುವ ಅಂಕಿ ಅಂಶ
ಭೂಮಿ ತಾಯಿಯ ಚೊಚ್ಚಲ ಮಗನ ಆತ್ಮಹತ್ಯೆ ಅಂಕಿಅಂಶ ಬೆಚ್ಚಿಬೀಳಿಸುವಂತಿದೆ. ರಸಗೊಬ್ಬರ ಪೂರೈಕೆ ವಿಳಂಬ, ಬೆಳೆ ಹಾನಿ, ಸಾಲಬಾಧೆ ಹೀಗೆ ಸಾಯುವುದಕ್ಕೆ ಕಾರಣ ಯಾವುದಾದರೂ ಹೇಳಬಹುದು. ಭಾರತದಲ್ಲಿ ಪ್ರತಿನಿತ್ಯ ಸುಮಾರು 46 ಜನ ರೈತರು ಸಾವನ್ನಪ್ಪುತ್ತಿದ್ದಾರೆ. ರೈತರ ಸಾವಿನ ಕೇಸುಗಳ ಸಂಖ್ಯೆ 16, 632 ಕ್ಕೂ ಅಧಿಕವಾಗಿದೆ. ಇದರಲ್ಲಿ 2,369 ಮಹಿಳೆಯರು ಎಂಬುದು ಗಮನಾರ್ಹ.
ಸಾಮಾಜಿಕವಾಗಿ ರೈತ ಸ್ವಾವಲಂಬಿಯಾಗದಿರುವುದು ಒಂದು ಕಾರಣ ಎನ್ನಲಾಗುತ್ತಿದೆ. ರೈತ ಎಂದೊಡನೆ ಆರ್ಥಿಕವಾಗಿ ಹಿಂದುಳಿದವ ಎಂಬುದು ಅನ್ವರ್ಥವಾಗಿ ಹೋಗಿದೆ. ಭತ್ತ, ರಾಗಿ, ಜೋಳ, ಗೋಧಿ, ಧಾನ್ಯಗಳಂಥ ಸಾಮಾನ್ಯ ಬೆಳೆಗಳ ಜೊತೆಗೆ ವಾಣಿಜ್ಯ ಆಧಾರಿತ ನೆಲಗಡಲೆ, ಕಬ್ಬು, ಹೊಗೆಸೊಪ್ಪು, ಹಣ್ಣುಗಳು ಮುಂತಾದ ತೋಟಗಾರಿಕಾ ಬೆಳೆಗಳನ್ನು ನೆಚ್ಚಿಕೊಂಡ ರೈತನೂ ಕಂಗಾಲಾಗಿದ್ದಾನೆ. ಉಳಿದಂತೆ ಮಾರುಕಟ್ಟೆ ಕುಸಿತ ಕಂಡು ದುಬಾರಿ ಬೆಳೆ ಎನಿಸಿದ್ದ ವೆನಿಲ್ಲಾ, ಪಚೋಲಿ, ಸುಗಂಧ ದ್ರವ್ಯಗಳ ಸಸ್ಯಗಳನ್ನು ಬೆಳೆಯುತ್ತಿದ್ದ ಮೇಲ್ಮಧ್ಯಮ ವರ್ಗದ ರೈತರು ಬೆಳೆಯುವುದನ್ನು ನಿಲ್ಲಿಸಿದ್ದಾರೆ.
ಕಾಫಿ, ಟೀ ಎಸ್ಟೇಟ್, ಏಲಕ್ಕಿ , ಮೆಣಸು, ಅಡಿಕೆ ಮುಂತಾದ ಸಾಂಬಾರು ಪದಾರ್ಥಗಳನ್ನು ಬೆಳೆದು ಮೆರೆಯುತ್ತಿದ್ದ ಪಶ್ಚಿಮಘಟ್ಟದ ಕುಬೇರರು ಇಂದು ದೊಡ್ಡ ದೊಡ್ಡ ಕಂಪೆನಿಗಳಿಗೆ ಎಸ್ಟೇಟನ್ನು ಮಾರಿದ್ದಾರೆ. ಹಲವರು ಎಸ್ಟೇಟನ್ನು ಹೋಂ ಸ್ಟೇ ಆಗಿ ಬದಲಿಸಿದ್ದಾರೆ. ಉದಾಹರಣೆಗೆ ಹೇಳೊದಾದರೆ ಕರ್ನಾಟಕದ ಚಿಕ್ಕಮಗಳೂರೊಂದರಲ್ಲೇ ಕೆಫೆ ಕಾಫಿಡೇ ಯ ಎಬಿಸಿಟಿಎಲ್ ಕಂಪೆನಿ ಸುಮಾರು 10, 000 ಎಕರೆಗೂ ಅಧಿಕ ಭೂಮಿಯನ್ನು ಖರೀದಿಸಿ ವಹಿವಾಟನ್ನು ಹಿಗ್ಗಿಸಿಕೊಂಡಿದೆ. ಸುಮಾರು 11 ಸಾವಿರಕ್ಕೂ ಅಧಿಕ ಸಣ್ಣ ಬೆಳೆಗಾರರು ಈ ಕಂಪೆನಿಗೆ ಕಚ್ಛಾ ವಸ್ತು ಒದಗಿಸುತ್ತಿದ್ದಾರೆ. ರೈತ ಸ್ವಾವಲಂಬಿಯಾಗಲೂ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಂತ ಎಬಿಸಿಟಿಎಲ್ ನಿಂದ ದಬ್ಬಾಳಿಕೆ ನಡೆದಿದೆ ಎಂದೇನೂ ಅಲ್ಲ.
ರಾಷ್ಟ್ರೀಯ ಅಪರಾಧಿ ದಾಖಲೆ ಇಲಾಖೆ (NCRB) ಯ 2007 ರ ಗಣತಿಯಂತೆ ಒಟ್ಟು 1,22,637 ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಶೇ 14.4 ರಷ್ಟು ರೈತರ ಪಾಲಿದೆ. 2006 ರಲ್ಲಿ 17, 060 ಪ್ರಕರಣಗಳು ಹಾಗೂ 1997 ರಲ್ಲಿ 1,82,936 ರೈತರ ಆತ್ಮಹತ್ಯಾ ಪ್ರಕರಣಗಳು ಸಿಕ್ಕಿವೆ. ಬೇಸಾಯವನ್ನೇ ನೆಚ್ಚಿಕೊಂಡಿರುವ ಭಾರತದಲ್ಲಿ ಮಹಾರಾಷ್ಟ್ರವಲ್ಲದೆ ಇನ್ನೂ 6 ರಾಜ್ಯಗಳು ರೈತರ ಸಾವಿನ ಸೂತಕ ಅನುಭವಿಸುತ್ತಿದೆ. ಸಾವಿರಕ್ಕೂ ಅಧಿಕ ಪ್ರಕರಣಗಳು ಕಳೆದ ವರ್ಷದಲ್ಲಿ ದಾಖಲಾಗಿದೆ. 2006 ರಿಂದ ಈಚೆಗೆ ವಿದರ್ಭಜಿಲ್ಲೆವೊಂದರಲ್ಲೇ 1,544 ಪ್ರಕರಣಗಳು ದಾಖಲಾಗಿವೆ.
ಕೇಂದ್ರದಿಂದ ಅತ್ಯಧಿಕವಾಗಿ ವಿಶೇಷ ಪ್ಯಾಕೇಜ್ ಪಡೆದೂ ಸಹ ಮಹಾರಾಷ್ಟ್ರದಲ್ಲಿ 4,238 ಪ್ರಕರಣ ಕಂಡು ಬಂದಿದೆ. ಆದರೆ 2006 ರ ಗಣತಿಗೆ ಹೋಲಿಸಿದರೆ 215 ಜನ ಕಮ್ಮಿ ಸತ್ತಿದ್ದಾರೆ ಎಂಬುದು ಸಮಾಧಾನ ಪಡುವ ವಿಷಯ.ಕರ್ನಾಟಕ(2,135), ಆಂಧ್ರಪ್ರದೇಶ(1,797), ಛತ್ತೀಸ್ ಗಢ(1,593),ಮಧ್ಯಪ್ರದೇಶ (1,263), ಕೇರಳ(1,263) ಹಾಗೂ ಪಶ್ಚಿಮ ಬಂಗಾಳ(1,102) ಇವು ಪಟ್ಟ್ಟಿಯಲ್ಲಿರುವ ಇತರೆ ರಾಜ್ಯಗಳು. 2006 ರ ಪಟ್ಟಿಯಲ್ಲೂ ಈ ರಾಜ್ಯಗಳು ಕಾಣಿಸಿಕೊಂಡಿದ್ದವು. ಕಳೆದ ವರ್ಷಕ್ಕೆ ಹೋಲಿಸಿದರೆ, ಮಹಾರಾಷ್ಟ್ರ, ಆಂಧ್ರಪ್ರದೇಶ, ಛತ್ತೀಸ್ ಗಢ ಹಾಗೂ ಮಧ್ಯಪ್ರದೇಶದಲ್ಲಿ ರೈತರ ಆತ್ಮಹತ್ಯೆ ಸಂಖ್ಯೆ ಸ್ವಲ್ಪ ಪ್ರಮಾಣದಲ್ಲಿ ಇಳಿಮುಖವಾಗಿದೆ. ಆದರೆ ಕರ್ನಾಟಕ, ಕೇರಳ ಹಾಗೂ ಪಶ್ಚಿಮ ಬಂಗಾಳದಲ್ಲಿ ಕಳೆದ ಬಾರಿಗಿಂತ ಅತ್ಮಹತ್ಯೆಗಳು ಹೆಚ್ಚಾಗಿವೆ.
ಪರಿಹಾರ: ಸತ್ತ ರೈತನ ಕುಟುಂಬಕ್ಕೆ ಕನಿಷ್ಠ 5 ಲಕ್ಷ ರೂನಂತೆ ಪರಿಹಾರ ಹಾಗೂ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿಯ ತಾತ್ಕಾಲಿಕ ಭರವಸೆಯಿಂದ ಯಾವುದೇ ಪ್ರಯೋಜನವಾಗಿಲ್ಲ. ಬೆಳೆಹಾನಿ ತಪ್ಪಿಸಲು ಬೆಳೆ ವಿಮೆ ಯೋಜನೆ ಸಂಪೂರ್ಣ ಜಾರಿಯಾಗಿಲ್ಲ. ಮಳೆ ಬೀಳದ ಬರದ ನಾಡಿಗೆ ನೀರುಣಿಸುವ ಕಾಯಕ ಕುಂಠಿತವಾಗಿ ಸಾಗಿದೆ. ಅನೇಕ ಸಣ್ಣ ನೀರಾವರಿ ಯೋಜನೆಗಳು(ಪಂಚಾಯತ್ ರಾಜ್ ಹಾಗೂ ಪಂಚ ವಾರ್ಷಿಕ ಯೋಜನೆಯಡಿಯಲ್ಲೇ) ಜಾರಿಗೊಂಡಿದ್ದರೂ ಪೂರ್ಣಗೊಂಡಿಲ್ಲ.
ಮಣ್ಣಿನ ಫಲವತ್ತತೆ ಕಾಯ್ದುಕೊಳ್ಳಲು, ಬೇಕಾದ ಬೀಜಕೊಳ್ಳಲು, ಋತುಮಾನಕ್ಕೆ ತಕ್ಕ ಬೆಳೆ ಬೆಳೆಯಲು ಸೂಕ್ತ ಮಾರ್ಗಸೂಚಿಯ ಕೊರತೆ ಇದೆ. ಎಲ್ಲಕ್ಕೂ ಮೂಲ ಎಂಬಂತೆ ಶೈಕ್ಷಣಿಕ ವ್ಯವಸ್ಥೆಯೇ ಹದಗೆಟ್ಟಿದೆ. ಅಗತ್ಯ ಜ್ಞಾನವಿಲ್ಲದೆ ಬೀಜ ಬಿತ್ತಿ ಬೆಳೆ ತೆಗೆದು ಮಾರಾಟ ಮಾಡುವ ಪ್ರತಿ ಹಂತದಲ್ಲೂ ರೈತರು ಮುಗ್ಗರಿಸುವಂತಾಗಿದೆ. ಸಂಕಷ್ಟ ಸಮಯದಲ್ಲಿ ರೈತರಿಗೆ ಸಿಗುವ ಪ್ಯಾಕೇಜ್ ಬಗ್ಗೆ ಕೂಡ ಮಾಹಿತಿ ಇರುವುದಿಲ್ಲ. ಹೆಲ್ಪ್ ಲೈನ್ ಗಳೂ ಇನ್ನೂ ರೈತರ ಸಂಪರ್ಕ ಸಾಧಿಸಿಲ್ಲ. ಎನ್ ಜಿಓಗಳ ನೆರವು ಸಾಲುತ್ತಿಲ್ಲ. ಮತ್ತೊಂದು ಹಸಿರುಕ್ರಾಂತಿಗೆ ಮಣ್ಣಿನ ಮಕ್ಕಳು ಮುಂದಾಗದೇ ವಿಧಿಯಿಲ್ಲ.
(ಸುದ್ದಿ ಸಂಗ್ರಹ:ಮಲೆನಾಡಿಗ)












Click it and Unblock the Notifications