ಮರುಚುನಾವಣೆಯಲ್ಲಿ ಮತ್ತೆ ಬಿಜೆಪಿ ಪ್ರಾಬಲ್ಯ ?

ಡಿ. 27 ರಂದು ನಡೆಯಲಿರುವ ಮರುಚುನಾವಣೆಗೆ ಒಟ್ಟು 73 ಅಭ್ಯರ್ಥಿಗಳು ಅಧಿಕೃತವಾಗಿ ಅಂತಿಮ ಕಣದಲ್ಲಿ ಉಳಿದಿದ್ದಾರೆ. ನಾಮಪತ್ರ ಹಿಂಪಡೆಯಲು ಕಡೆಯ ದಿನವಾದ ಶನಿವಾರ ಒಟ್ಟು 39 ಮಂದಿ ನಾಮಪತ್ರ ವಾಪಸ್ ಪಡೆದರು. ಹುಕ್ಕೇರಿಯಲ್ಲಿ ಪ್ರಮುಖ ಮೂರು ಪಕ್ಷಗಳ ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದು, ಅತಿ ಕಡಿಮೆ ಅಭ್ಯರ್ಥಿಗಳಿರುವ ಕ್ಷೇತ್ರ ಎನಿಸಿದೆ.

*ಮೃತ್ಯುಂಜಯ ಕಲ್ಮಠ

ಎಂಟು ಕ್ಷೇತ್ರ ಮರುಚುನಾವಣೆಯಲ್ಲಿ ಕ್ಷೇತ್ರದಲ್ಲಿ ಮಧುಗಿರಿ ಅತ್ಯಂತ ಆಕರ್ಷಣೆ ಹಾಗೂ ಕುತೂಹಲ ಮೂಡಿಸಿರುವ ಕ್ಷೇತ್ರವಾಗಿದೆ. ಪಕ್ಷದ ಅಸ್ತಿತ್ವ ಉಳಿಸಲು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ತಮ್ಮ ಸೊಸೆ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರ ಸ್ಪರ್ಧೆ ಕೇಂದ್ರ ಬಿಂದುವಾಗಿದೆ. ಅನಿತಾ ಕುಮಾರಸ್ವಾಮಿ ವಿರುದ್ಧ ಬಿಜೆಪಿಯಿಂದ ಸಿ ಚೆನ್ನಿಗಪ್ಪ ಹಾಗೂ ಕಾಂಗ್ರೆಸ್ ನಿಂದ ಕೆ ಎನ್ ರಾಜಣ್ಣ ಸ್ಪರ್ಧಿಸಿದ್ದು, ತ್ರಿಕೋನ ಹಣಾಹಣಿ ನಡೆಯುವುದು ಖಚಿತವಾಗಿದೆ. ಅನಿತಾ ಅವರೇ ಕೊಂಚ ಮುಂದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಒಂದು ಕಾಲದ ದೇವೇಗೌಡರ ಮನೆಯ ನಿಯತ್ತಿನ ನಾಯಿ (ಚೆನ್ನಿಗಪ್ಪ ಈ ಹೇಳಿಕೆಯನ್ನು ಸಾರ್ವಜನಿಕವಾಗಿ ಈ ಹಿಂದೆ ಹೇಳಿದ್ದರು) ಹಾಗೂ ರೆಡ್ಡಿಗಳ ಪ್ರಬಲ ವೈರಿ ಎಂದೇ ಗುರುತಿಸಿಕೊಂಡಿದ್ದ ಸಿ ಚೆನ್ನಿಗಪ್ಪ ಇಂದು ಬಿಜೆಪಿ ಅಭ್ಯರ್ಥಿ. ಅಲ್ಲದೇ ದೇವೇಗೌಡರ ಮೇಲಿರುವ ವೈರತ್ವದಿಂದ ಚೆನ್ನಿಗಪ್ಪ ಅವರ ಚುನಾವಣೆಯ ವೆಚ್ಚವನ್ನು ಭರಿಸಲು ರೆಡ್ಡಿ ಸಹೋದರರು ರೆಡಿಯಾಗಿರುವುದು ಪ್ರಜಾಪ್ರಭುತ್ವವನ್ನು ಅಣಕಿಸುವಂತಿದೆ. ಈ ಇಬ್ಬರಿಗೂ ಕಾಂಗ್ರೆಸ್ ನ ಕೆ ಎನ್ ರಾಜಣ್ಣ ಕೂಡ ಪ್ರಬಲ ಪೈಪೋಟಿ ನೀಡುವುದರಲ್ಲಿ ಸಂಶಯವಿಲ್ಲ.

ಉಳಿದಂತೆ ಮದ್ದೂರಿನಲ್ಲಿ ಜೆಡಿಎಸ್ ನಿಂದ ಕಲ್ಪನಾ ಸಿದ್ದರಾಜು ಸ್ಪರ್ಧಿಸಿದ್ದು, ಅನುಕಂಪ ಅಲೆ ಮೇಲೆ ಜೆಡಿಎಸ್ ಗೆಲ್ಲುವ ಸಾಧ್ಯತೆಗಳೆ ಹೆಚ್ಚು. ಬಿಜೆಪಿಯಿಂದ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಡಿ ಸಿ ತಮ್ಮಣ್ಣ ಸ್ಪರ್ಧಿಸಿದ್ದರೂ ಕಲ್ಪನಾ ಅವರನ್ನು ಅಲ್ಲಿಯ ಮತದಾರರು ಕೈಬಿಡಲಾರರು. ಕಾಂಗ್ರೆಸ್ ನಿಂದ ಎಸ್ ಎಂ ಕೃಷ್ಣ ಅಳಿಯ ಗುರುಚರಣ್ ಸ್ಪರ್ಧಿಸಿದ್ದಾರೆ. ಆದರೆ ಎರಡನೇ ಸ್ಥಾನಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಸ್ಪರ್ಧೆ ನಡೆಸಬಹುದು.

ತುರುವೇಕೆರೆಯಲ್ಲಿ ಕೂಡ ಜೆಡಿಎಸ್ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎರಡನೇ ಸ್ಥಾನದಲ್ಲಿ ಜೆಡಿಎಸ್ ಅಭ್ಯರ್ಥಿ ಎಂ ಟಿ ಕೃಷ್ಣಪ್ಪ, ಈ ಸಲ ಮತ್ತೆ ಅಖಾಡಕ್ಕೆ ಇಳಿದಿದ್ದಾರೆ. ಕಾಂಗ್ರೆಸ್ ಶಾಸಕರಾಗಿದ್ದ ಜಗ್ಗೇಶ್ ತಮ್ಮ ಹೆಸರಿಗೆ ಮಸಿ ಬಳಿದುಕೊಂಡಿದ್ದರಿಂದ ಇಲ್ಲಿ ಕೂಡ ಕಾಂಗ್ರೆಸ್ ಮತಗಳು ಜೆಡಿಎಸ್ ಪರ ವಾಲುವ ಸಾಧ್ಯತೆಗಳು ಹೆಚ್ಚಾಗಿವೆ. ಬಿಜೆಪಿಯಿಂದ ಲಕ್ಷ್ಮಿನಾರಾಯಣ ಸ್ಪರ್ಧಿಸಿದ್ದರೂ ಕಮಲದ ಪ್ರಭಾವ ಇಲ್ಲಿ ಅಷ್ಟಾಗಿ ಬೀರುವ ಸಾಧ್ಯತೆಗಳು ಕಡಿಮೆ.

ದೊಡ್ಡಬಳ್ಳಾಪುರದಲ್ಲಿ 'ಕೈ'ಚಳಕ ತೋರಿಸುವ ಸಾಧ್ಯತೆಗಳಿವೆ. ಆರ್ ಎಲ್ ಜಾಲಪ್ಪ ಅವರ ಪುತ್ರ ಜೆ ನರಸಿಂಹಯ್ಯ ಅವರು ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ಆದರೆ ಮತದಾರರ ಚಿತ್ತ ಬೇರೆಡೆ ನೆಟ್ಟಿರುವುದು ಕಂಡು ಬರತೊಡಗಿದೆ. ಉತ್ತರ ಕರ್ನಾಟಕದ ವಿಷಯಕ್ಕೆ ಬರುವುದಾದರೆ ಈ ಪ್ರದೇಶದಲ್ಲಿ ಲಿಂಗಾಯತ ಸಮುದಾಯ ಹೆಚ್ಚಿರುವುದರ ಜೊತೆಗೆ ಬೆಜೆಪಿಯಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳು ರಾಜ್ಯ ಸರ್ಕಾರದ ಸಂಪುಟ ದರ್ಜೆಯ ಸಚಿವರಾಗಿದ್ದಾರೆ. ಹಣಬಲ, ಅಧಿಕಾರ ಬಲ, ಪಕ್ಷ ಬಲ, ಲಿಂಗಾಯಿತರ ಬೆಂಬಲ ಎಲ್ಲವೂ ಸೇರಿದರೆ (?) ಬಿಜೆಪಿ ಗೆಲುವು ಸರಳವಾಗುವುದರಲ್ಲಿ ಎಳ್ಳಷ್ಟು ಸಂಶಯವಿಲ್ಲ.

ದೇವದುರ್ಗದಲ್ಲಿ ಶಿವನಗೌಡ ನಾಯಕ, ಕಾರವಾರದಲ್ಲಿ ಆನಂದ ಆಸ್ನೋಟಿಕರ್, ಅರಭಾವಿಯಲ್ಲಿ ಬಾಲಚಂದ್ರ ಜಾರಕಿಹೊಳಿ, ಹುಕ್ಕೇರಿಯಲ್ಲಿ ಉಮೇಶ್ ಕತ್ತಿ ಅವರ ಗೆಲುವಿಗೆ ಯಾವುದೇ ಅಡ್ಡಿ ಆತಂಕಗಳು ಎದುರಾಗುವ ಸಾಧ್ಯತೆಗಳು ಕಮ್ಮಿಯಾಗಿವೆ. ಒಟ್ಟಿನಲ್ಲಿ ಎಂಟು ವಿಧಾನಸಭೆಯ ಮರುಚುನಾವಣೆಯಲ್ಲಿ ಸದ್ಯದ ಪರಿಸ್ಥಿತಿ ಪ್ರಕಾರ ಜೆಡಿಎಸ್ 3 (ಮಧುಗಿರಿ, ತುರುವೇಕೆರೆ, ಮದ್ದೂರು), ಕಾಂಗ್ರೆಸ್ 1 (ದೊಡ್ಡಬಳ್ಳಾಪುರ), ಹಾಗೂ 4 ಕ್ಷೇತ್ರಗಳಲ್ಲಿ ಆಡಳಿತರೂಢ ಬಿಜೆಪಿ ಸರ್ಕಾರ ಜಯಭೇರಿ ಬಾರಿಸುವ ಸಾಧ್ಯತೆಗಳಿವೆ. ಮುಂದಿನ ದಿನಗಳಲ್ಲಿ ಸ್ವಲ್ಪ ಬದಲಾವಣಿ ಸಂಭವಿಸಿದಲ್ಲಿ ತುರುವೇಕೆರೆ ಕಾಂಗ್ರೆಸ್ ತೆಕ್ಕೆ ಹೋಗಬಹುದು. ಜೆಡಿಎಸ್ -ಕಾಂಗ್ರೆಸ್ ಗೆ ತಲಾ ಎರಡು, ಹಾಗೂ ಯಥಾ ಪ್ರಕಾರ ಬಿಜೆಪಿಗೆ 4 ಕ್ಷೇತ್ರಗಳಲ್ಲಿ ವಿಜಯ ಕಟ್ಟಿಟ್ಟಬುತ್ತಿ ಎನ್ನುವುದು ಪ್ರಾಥಮಿಕ ವರದಿಯಿಂದ ಸ್ಪಷ್ಟವಾಗಿದೆ.

ಎಂಟು ಕ್ಷೇತ್ರಗಳ ಅಭ್ಯರ್ಥಿಗಳ ವಿವರ ಇಂತಿದೆ.

* ಹುಕ್ಕೇರಿ : ಉಮೇಶ್ ಕತ್ತಿ (ಬಿಜೆಪಿ), ಜಯಪ್ರಕಾಶ್ ನಲವಡೆ (ಕಾಂಗ್ರೆಸ್), ಬಸವರಾಜ ಮಠಗಾರ (ಜೆಡಿಎಸ್)

* ಅರಭಾವಿ : ಅರವಿಂದ ದಳವಾಯಿ (ಜೆಡಿಎಸ್), ಬಾಲಚಂದ್ರ ಜಾರಕಿಹೊಳಿ (ಬಿಜೆಪಿ), ವಿವೇಕರಾವ್ ಪಾಟೀಲ್ (ಕಾಂಗ್ರೆಸ್), ಅಡಿವೆಪ್ಪ ಉಪ್ಪಾರ ಹಾಗೂ ಪಾರಿಸ್ ತಮದಡ್ಡಿ ( ಇಬ್ಬರೂ ಪಕ್ಷೇತರರು).

* ದೇವದುರ್ಗ: ಭಗವಂತರಾಯ ದಳವಾಯಿ (ಕಾಂಗ್ರೆಸ್), ಡಾ. ಸಿ ರಘು (ಜೆಡಿಎಸ್), ಶಿವನಗೌಡ ನಾಯಕ್ (ಬಿಜೆಪಿ), ರಾಮಕೃಷ್ಣ ನಾಯಕ್ (ಜೆಡಿಯು), ಬೂದೆಪ್ಪ ನಾಯಕ್, ಮನಷಯ್ಯ ನಾಯಕ್, ವಿ ಎಚ್ ಮಾಸ್ಟರ್, ಮುದುಕಪ್ಪ ನಾಯಕ್, ರಂಗಪ್ಪ ರಾಜ, ಹನುಮಂತರಾಯ ( ಎಲ್ಲರೂ ಪಕ್ಷೇತರರು).

* ಕಾರವಾರ: ಆನಂದ್ ಅಸ್ನೋಟಿಕರ್ (ಬಿಜೆಪಿ), ದೇವಿದಾಸ್ ಗಾಂವ್ಕರ್ (ಜೆಡಿಎಸ್), ಸತೀಶ್ ಕೃಷ್ಣ ಶೈಲ್ (ಕಾಂಗ್ರೆಸ್), ಪದ್ಮನಾಭ್ ನಾಯಕ್ ಹಾಗೂ ಯಲೀಶ ಯಲಕಪತಿ (ಪಕ್ಷೇತರರು).

* ತುರುವೇಕೆರೆ :ಎಂ ಟಿ ಕೃಷ್ಣಪ್ಪ (ಜೆಡಿಎಸ್), ಎಚ್ ಬಿ ನಂಜೇಗೌಡ (ಕಾಂಗ್ರೆಸ್), ಎಂ ಡಿ ಲಕ್ಷ್ಮಿನಾರಾಯಣ (ಬಿಜೆಪಿ), ಎನ್ ಅಂಜನ್ ಮೂರ್ತಿ (ಜೆಡಿಯು), ಎನ್ ಗಂಗಾಧರಯ್ಯ, ಬಿ ಆರ್ ಮಂಜುನಾಥ್, ಎಂ ಕೆ ವರದರಾಜು (ಎಲ್ಲರೂ ಪಕ್ಷೇತರರು).

* ದೊಡ್ಡಬಳ್ಳಾಪುರ : ಜೆ ನರಸಿಂಹಸ್ವಾಮಿ (ಬಿಜೆಪಿ), ಆರ್ ಜಿ ವೆಂಕಟಾಚಲಯ್ಯ (ಕಾಂಗ್ರೆಸ್), ಬಿ ಮುನೇಗೌಡ (ಜೆಡಿಎಸ್), ಎಲ್ ಲಿಂಗರಾಜು ಮತ್ತು ರಾಮಾಂಜನೇಯರೆಡ್ಡಿ (ಪಕ್ಷೇತರರು).

* ಮಧುಗಿರಿ : ಅನಿತಾ ಕುಮಾರಸ್ವಾಮಿ (ಜೆಡಿಎಸ್), ಕೆ ಎನ್ ರಾಜಣ್ಣ (ಕಾಂಗ್ರೆಸ್), ಸಿ ಚೆನ್ನಿಗಪ್ಪ (ಬಿಜೆಪಿ), ಅಭಿಮಾನಿ ನರೇಂದ್ರ, ಬಿ ಎ ಅಹಮದ್, ಎಂ ಎಸ್ ಕೃಷ್ಣಮೂರ್ತಿ. ಗ್ಯಾರಣ್ಣ, ಎ ಎನ್ ಬಾಷಾ, ಎಂ ಮಹೇಶ್, ರಂಗನಾಥ್ ಎಂ ರಂಗನಾಥ್, ಎಂ ಜಿ ರಘು, ಎ ಸಿ ರಂಗಸ್ವಾಮಿ, ರಾಜಣ್ಣ, ಕೆ ಆರ್ ರಾಜಣ್ಣ (ಪಕ್ಷೇತರರು)

* ಮದ್ದೂರು: ಕಲ್ಪನಾ ಸಿದ್ದರಾಜು (ಜೆಡಿಎಸ್), ಡಿ ಸಿ ತಮ್ಮಣ್ಣ (ಬಿಜೆಪಿ), ಎಸ್ ಗುರುಚರಣ್ (ಕಾಂಗ್ರೆಸ್), ಎಚ್ ಆರ್, ಚಂದ್ರಶೇಖರಯ್ಯ, ಪಿ ಸಿ ಕೃಷ್ಣೇಗೌಡ, ಕೆ ಎಚ್ ಯೋಗೀಶ್, ಜಿ ಟಿ ರವಿಕುಮಾರ್, ಶಂಭುಲಿಂಗಗೌಡ (ಪಕ್ಷೇತರರು).

ಪೂರಕ ಓದಿಗೆ:

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+