ಅಭಿವೃದ್ಧಿಗಾಗಿ ರಾಜಕೀಯ ಮಾಡಿ, ಕಲಾಂ
ಬೆಂಗಳೂರು, ಡಿ. 14 : ವೈಯಕ್ತಿಕ ಹಿತಕ್ಕೆ ಸಮಾಜದ ಒಳಿತನ್ನು ಬಲಿಕೊಡಬೇಡಿ, ಜನರ ಸಮಸ್ಯೆ ಪರಿಹರಿಸಲು ನಿಮ್ಮದೇ ದೃಷ್ಟಿಕೋನ ಬೆಳಸಿಕೊಳ್ಳಿ, ಪಕ್ಷ ರಾಜಕಾರಣ ತೊರೆದು ಭ್ರಷ್ಟರಾಗದೆ ಕೆಲಸ ಮಾಡಲು ನೀವು ಸಿದ್ಧವಾದರೆ, ಕರ್ನಾಟಕವನ್ನು ಮುಂಚೂಣಿಯಲ್ಲಿ ತರುವುದು ಕಷ್ಟದ ಕೆಲಸವಲ್ಲ ಎಂದು ವಿಜ್ಞಾನ ಸಮೂಹದ ಅಚ್ಚಿಮೆಚ್ಚಿನ ಕಲಾಂ ಮೇಷ್ಟ್ರು ನೀತಿ ಪಾಠ ಹೇಳುತ್ತಿದ್ದರೆ ಇಡೀ ತರಗತಿ ಆಸಕ್ತಿಯಿಂದ ಆಲಿಸುತ್ತಿತ್ತು.
ಈ ವಿಶೇಷ ತರಗತಿಯಲ್ಲಿ ನಮ್ಮನ್ನು ಆಳುವ ಜನಪ್ರನಿಧಿಗಳೇ ವಿದ್ಯಾರ್ಥಿಗಳಾಗಿ, ದಶಕಗಳ ಹಿಂದಿನ ತಮ್ಮ ವಿದ್ಯಾರ್ಥಿ ಜೀವನದ ಸವಿನೆನಪಿಗೆ ಜಾರಿದರು. ನಗರದ ಬನ್ನೇರು ಘಟ್ಟ ರಸ್ತೆಯಲ್ಲಿರುವ ಇಂಡಿಯನ್ ಇಸ್ಟಿಟಿಟ್ಯೂಟ್ ಅಫ್ ಮ್ಯಾನೇಜ್ ಮೆಂಟ್ (ಐಐಎಂ) ಸಭಾಂಗಣದಲ್ಲಿ ನೂತನ ಶಾಸಕರಿಗಾಗಿ ರಾಜ್ಯ ವಿಧಾನಮಂಡಲ ಆಯೋಜಿಸಿದ್ದ ಪ್ರಶಿಕ್ಷಣ ಶಿಬಿರವನ್ನು ಕುರಿತು ಅವರ ಮಾತನಾಡಿದರು.
ಅಭಿವೃದ್ಧಿಪರ ರಾಜಕೀಯ ಮಾಡಿ ಚುನಾವಣೆಯಲ್ಲಿ ಗೆಲ್ಲಲು ಯತ್ನಿಸಿ ಎಂದ ಕಲಾಂ, ಅಭಿವೃದ್ಧಿ ರಾಜಕೀಯ ಎಷ್ಟು ಹೆಚ್ಚಾಗುತ್ತದೋ ರಾಜಕೀಯದ ಬಗ್ಗೆ ಜನಸಾಮಾನ್ಯರಲ್ಲಿ ಗೌರವ ಹೆಚ್ಚಾಗುತ್ತದೆ ಎಂದು ಹೇಳಿದರು. ರಾಜಕಾರಣದ ರಾಜಕೀಯ ಚುನಾವಣೆಗಾಗಿ ಬೇಕಿತ್ತು. ಆದರೆ, ನೀವು ಈಗಾಗಲೇ ಈ ಹಂತ ದಾಟಿದ್ದೀರಿ. ಇಂದು ನಿಮ್ಮ ಕ್ಷೇತ್ರಕ್ಕೆ ಬೇಕಾಗಿರುವುದು ಅಭಿವೃದ್ಧಿ ಹಾಗೂ ಸಮರ್ಥ ನಾಯಕತ್ವದ ರಾಜಕೀಯ ಎಂದು ಅವರು ಪ್ರತಿಪಾದಿಸಿದರು. ಈ ಶಿಬಿರಕ್ಕೆ 81 ಮಂದಿ ವಿಧಾನಸಭೆ ಸದಸ್ಯರು, 22 ಮಂದಿ ವಿಧಾನ ಪರಿಷತ್ ಸದಸ್ಯರು ಪಾಲ್ಗೊಂಡಿದ್ದರು.
ಕಲಾಂ ಶಾಸಕರಿಗೆ ನೀಡಿದ ಕೆಲ ಸಲಹೆಗಳು
* ತನ್ನ ಅಭಿವೃದ್ಧಿ ಪ್ರಗತಿ, ಸಮಸ್ಯೆ ಹಾಗೂ ಉಪಾಯಗಳ ಬಗ್ಗೆ ಪ್ರತಿಯೊಬ್ಬ ನಾಗರಿಕರ ಜತೆಗೆ ಸಂಪರ್ಕ ಕಲ್ಪಿಸಬಲ್ಲಂಥ ವೆಬ್ ಸೈಟನ್ನು ಪ್ರತಿಯೊಬ್ಬ ಶಾಸಕರು ಹೊಂದಿರಬೇಕು.
* ಪ್ರತಿ ಶಾಸಕರೂ ಕೆಲ ಅಭಿವೃದ್ಧಿ ಕ್ಷೇತ್ರದಲ್ಲಿ ಪರಿಣತಿ ಗಳಿಸಿರುತ್ತಾರೆ. ಇತರ ಶಾಸಕರೊಂದಿಗೆ ಪರಸ್ಪರ ಚರ್ಚೆಸುವ ಮೂಲಕ ಈ ರೀತಿಯ ಪರಿಣತಿಯ ಹಂಚಿಕೆ ಮಾಡಿಕೊಳ್ಳಬೇಕು.
* ಯೋಜನೆಗಳ ಬಗ್ಗೆ ಸ್ವತಂತ್ರ ನಾಗರಿಕರ ಮೂಲಕ ಪ್ರತಿನಿತ್ಯ ಮೇಲ್ವಿಚಾರಣೆ ಅಗತ್ಯ. ಈ ಮೂಲಕ ಯೋಜನೆಯ ಸವಲತ್ತುಗಳ ಉದ್ದೇಶಿತ ನಾಗರಿಕರಿಗೆ ತಲುಪುವ ಹಾಗೂ ಬೇಕಿದ್ದಲ್ಲಿ ಮಧ್ಯಂತರ ತಿದ್ದುಪಡಿಗಳನ್ನು ಮಾಡಿಕೊಳ್ಳಲು ಸಾಧ್ಯವಾಗುತ್ತಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications