ಉಗ್ರರನ್ನು ಹಸ್ತಾಂತರಿಸಲು ಸಾಧ್ಯವಿಲ್ಲ,: ಪಾಕ್
ಇಸ್ಲಾಮಾಬಾದ್, ಡಿ. 10 : ಭಾರತ ಒಂದು ಪಕ್ಷ ನಮ್ಮ ಮೇಲೆ ಯುದ್ದ ಸಾರಿದರೆ ನಾವು ಅದಕ್ಕೆ ತಯಾರಾಗಿದ್ದೇವೆ, ಆದರೆ ನಾವು ಉಗ್ರರನ್ನು ಭಾರತದ ವಶಕ್ಕೆ ನೀಡುವುದಿಲ್ಲ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಶಿ ಸ್ಪಷ್ಟಪಡಿಸಿದ್ದಾರೆ.
ಪಾಕಿಸ್ತಾನ ಶಾಂತಿಪ್ರಿಯ ರಾಷ್ಟ್ರ, ಈ ಪ್ರದೇಶದಲ್ಲಿ ಶಾಂತಿ ನೆಲೆಸಬೇಕೆನ್ನುವುದು ನಮ್ಮ ಉದ್ದೇಶ. ಇದು ನಮ್ಮ ದೌರ್ಬಲ್ಯತೆ ಎಂದು ಯಾರೂ ತಿಳಿಯಬಾರದು. ನಮ್ಮ ತಾಯಿನಾಡನ್ನು ಯಾವ ರೀತಿ ರಕ್ಷಿಸಬೇಕೆಂದು ನಮಗೆ ತಿಳಿದಿದೆ. ಒಂದು ವೇಳೆ ಭಾರತ ನಮ್ಮ ಮೇಲೆ ಯುದ್ದ ಸಾರಿದರೆ ಅದಕ್ಕೆ ತಕ್ಕ ಉತ್ತರ ನೀಡುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.
ಮುಂಬೈ ಕೃತ್ಯದಲ್ಲಿನ ಪಾಕ್ ಉಗ್ರರ ಬಗ್ಗೆ ಮಾತನಾಡುತ್ತ, ಶಂಕಿತ ಉಗ್ರರನ್ನು ಈಗಾಗಲೇ ಬಂದಿಸಿದ್ದೇವೆ. ಇದು ನಮ್ಮ ತನಿಖೆಗೆ ಹೊರತು ಭಾರತಕ್ಕೆ ಹಸ್ತಾ೦ತರಿಸುವದಕ್ಕೆ ಅಲ್ಲ. ಮುಂಬೈ ಘಟನೆಯಲ್ಲಿ ಈ ಉಗ್ರರ ಕೈವಾಡ ರುಜುವಾತು ಆದರೂ ನಾವು ಇವರನ್ನು ಹಸ್ತಾಂತರಿಸುವ ಪ್ರಶ್ನೆಯೇ ಇಲ್ಲ ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.
ಉಗ್ರರ ಯಾವುದೇ ಚಟುವಟಿಕೆಗೆ ಪಾಕ್ ತಾಣವಾಗಬಾರದು ಎಂದು ಲಷ್ಕರ್ ಇ ತೊಯ್ಬಾ ಮುಂತಾದ ಸಂಘಟನೆಯ ಉಗ್ರರನ್ನು ಬಂದಿಸಿದ್ದೇವೆ. ನಮ್ಮ ದೇಶದ ಕಾನೂನು ಪ್ರಕಾರ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಖುರೇಶಿ ಹೇಳಿದ್ದಾರೆ. ನಿನ್ನೆಯಷ್ಟೆ ಪಾಕಿಸ್ತಾನದ ರಕ್ಷಣಾ ಸಚಿವ ಚೌದರಿ ಅಹಮ್ಮದ್ ಮುಕ್ತರ್, ಭಯೋತ್ಪಾದನೆ ನಿಯಂತ್ರಣಕ್ಕೆ ನಾವು ಭಾರತದ ಜೊತೆ ಅಥವಾ ವಿಶ್ವದ ಯಾವುದೇ ರಾಷ್ಟ್ರದ ಜೊತೆ ಯಾವ ರೀತಿಯ ಹೊಂದಣೆಕೆಗೂ ಸಿದ್ದ ಎಂದು ಹೇಳಿಕೆ ನೀಡಿದ್ದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications