ಹುಟ್ಟುಹಬ್ಬ ಆಚರಣೆಗೆ ಸೋನಿಯಾ ನಕಾರ
ನವದೆಹಲಿ, ಡಿ.9 : ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಇಂದು 62 ನೇ ವಸಂತಕ್ಕೆ ಕಾಲಿಸಿರಿಸಿದ್ದಾರೆ. ಮುಂಬೈ ಭಯೋತ್ಪಾದನೆಯ ಹಿನ್ನೆಲೆಯಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಆದರೆ ಗೃಹ ಸಚಿವ ಪಿ ಚಿದಂಬರಂ ಸೇರಿ ಬೆರಳೆಣಿಕೆಯಷ್ಟು ಮಂದಿ ಮುಖಂಡರು ಸೋನಿಯಾ ನಿವಾಸಕ್ಕೆ ತೆರಳಿ ಶುಭ ಕೋರಿದರು.
ಕಾಂಗ್ರೆಸ್ ಕಾರ್ಯಕರ್ತರಿಗೆ 10 ಜನಪಥ್ ನಿವಾಸ್ ಬಾಗಿಲು ಮುಚ್ಚಿದೆ. ನಾಯಕಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ಯಾವ ಕಾರ್ಯಕರ್ತರಿಗೂ ಅವಕಾಶವಿಲ್ಲ ಎಂದು ಸಿಬ್ಬಂದಿಗಳು ಕಾರ್ಯಕರ್ತರನ್ನು ಹಿಂದಕ್ಕೆ ಕಳುಹಿಸುತ್ತಿದ್ದಾರೆ. ಪಟ್ಟು ಬಿಡದ ಕೆಲ ಕಾರ್ಯಕರ್ತರು ತಮ್ಮ ನಾಯಕಿಯನ್ನು ಭೇಟಿ ಮಾಡಿ ಶುಭ ಕೋರಿ ಹಿಂದಿರುಗುತ್ತಿರುವುದು ಕಂಡು ಬಂದಿತು.
ಕಾಂಗ್ರೆಸ್ ಕಾರ್ಯಕರ್ತರು ದೆಹಲಿಯಲ್ಲಿ ತಮ್ಮ ನಾಯಕಿ ಹುಟ್ಟುಹಬ್ಬವನ್ನು ಅದ್ಧೂರಿಯಿಂದ ಆಚರಿಸಲು ಬೃಹತ್ ಯೋಜನೆಯನ್ನೆ ಹಾಕಿಕೊಂಡಿದ್ದರು. ಆದರೆ ಮುಂಬೈಯಲ್ಲಿ ನಡೆದ ದುರಂತದಿಂದ ಹುಟ್ಟುಹಬ್ಬದ ಬೃಹತ್ ಯೋಜನೆಯನ್ನು ರದ್ದುಗೊಳಿಸಲಾಗಿದೆ. ಮುಂಬೈ ಭಯೋತ್ಪಾದನೆಯಲ್ಲಿ ಮೃತಪಟ್ಟಿರುವ ಅನೇಕ ಅಮಾಯಕರಿಗೆ ತಮ್ಮ ಹುಟ್ಟು ಹಬ್ಬದ ದಿನದಂದು ಶಾಂತಿ ಸಂಕೇತದ ಸಭೆ ಆಚರಿಸಲು ಸೂಚಿಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ತಿಳಿಸಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications