ಬಿಜೆಪಿ ಜತೆ ಸಿದ್ದು ಗೌಪ್ಯ ಹೊಂದಾಣಿಕೆ: ಎಚ್ ಡಿಕೆ
ಮೈಸೂರು, ಡಿ. 9 : ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ರಾತ್ರಿಯಾದ ನಂತರ ರಾಜಕೀಯ ಚಟುವಟಿಕೆಗಳನ್ನು ಆರಂಭಿಸುತ್ತಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಗುಟ್ಟಾಗಿ ಸಭೆ ನಡೆಸುತ್ತಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಮತ್ತೊಮ್ಮೆ ಸಿದ್ದು ವಿರುದ್ಧ ಸೆಡ್ಡು ಹೊಡೆದಿದ್ದಾರೆ.
ನಗರದ ಸಂದೇಶ ಹೋಟೆಲ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ರಾಜಕೀಯ ಕಾರ್ಯಚಟುವಟಿಕೆಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮಾಜಿ ಪ್ರಧಾನಿ ದೇವೇಗೌಡ ಅಂದಿನ ಮುಖ್ಯಮಂತ್ರಿ ದೇವರಾಜ್ ಅರಸ್ ಮತ್ತು ಗುಂಡೂರಾವ್ ಅವರನ್ನು ರಾತ್ರಿ ಹೊತ್ತಿನಲ್ಲಿ ಭೇಟಿ ಮಾಡುತ್ತಿದ್ದರು ಎಂದು ಸಿದ್ದರಾಮಯ್ಯ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡರು ಅಂದು ಪ್ರತಿಪಕ್ಷದ ನಾಯಕರರಾಗಿದ್ದರು. ಅಭಿವೃದ್ಧಿ ಕೆಲಸಗಳನ್ನು ಚರ್ಚಿಸಲು ರಾತ್ರಿ ಭೇಟಿಯಾಗುತ್ತಿದ್ದರು. ಅದು ಎಲ್ಲರಿಗೂ ಗೊತ್ತಿರುವ ಸಂಗತಿ ಎಂದು ಅವರು ಸ್ಪಷ್ಟಪಡಿಸಿದರು.
ದೇವೇಗೌಡ ಅಂದಿನ ಮುಖ್ಯಮಂತ್ರಿಯವರನ್ನು ಭೇಟಿ ಮಾಡುವುದಕ್ಕೂ ಇಂದು ಸಿದ್ದರಾಮಯ್ಯ ಇಂದಿನ ಮುಖ್ಯಮಂತ್ರಿಯವರನ್ನು ಭೇಟಿ ಮಾಡುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡುವುದಕ್ಕೆ ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಸ್ಥಾನಮಾನಗಳನ್ನೆ ನೀಡಿಲ್ಲ. ಹೀಗಿರುವಾಗ ಭೇಟಿ ಮಾತು ಎಲ್ಲಿಂದ ಬರಲಿದೆ ಎಂದು ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡ ಕುಮಾರಸ್ವಾಮಿ, ರಾಜಕೀಯ ಆಟವಾಡಲು ಸಿಎಂ ಅವರನ್ನು ಸಿದ್ದು ಭೇಟಿ ಮಾಡುತ್ತಾರೆ ಎಂದು ಕಿಚಾಯಿಸಿದರು.
ಅಭಿವೃದ್ಧಿ ಕಾರ್ಯಗಳನ್ನು ಚರ್ಚಿಸಿಲು ಸಿಎಂ ಅವರನ್ನು ಸಿದ್ದು ಭೇಟಿ ಮಾಡುವುದಾದರೆ ಅಭ್ಯಂತರವಿಲ್ಲ. ಆದರೆ ಕಾಂಗ್ರೆಸ್ ಪಕ್ಷದಲ್ಲಿದ್ದುಕೊಂಡು ಬಿಜೆಪಿ ಪಕ್ಷಕ್ಕೆ ಬೆಂಬಲ ಸೂಚಿಸುವುದು ಸರಿಯಲ್ಲ ಎಂದರು. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸಿದ್ದು ಬಿಜೆಪಿ ಜೊತೆಗೆ ಗೌಪ್ಯ ಒಪ್ಪಂದ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಕುಮಾರಸ್ವಾಮಿ ಸಂಶಯ ವ್ಯಕ್ತಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)
ಜೆಡಿಎಸ್ ಅಪ್ಪ, ಮಕ್ಕಳ, ಸೊಸೆ ಪಕ್ಷ, ಅಶೋಕ್












Click it and Unblock the Notifications