ಬಿಜೆಪಿ ಸಚಿವರ ಮೇಲಿದ್ದ ಪಿಐಲ್ ವಜಾ
ಬೆಂಗಳೂರು, ಡಿ. 9 : ಬಿಜೆಪಿ ಸರ್ಕಾರದ 7 ಸಚಿವರು ಸೇರಿದಂತೆ ಒಟ್ಟು 18 ಶಾಸಕರು ಅಪರಾಧ ಹಿನ್ನೆಲೆಯುಳ್ಳವರಾಗಿದ್ದು,ಅವರ ವಿರುದ್ಧ ಸಿಬಿಐ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಇಂದು ವಜಾಗೊಳಿಸಿದೆ.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ ಡಿ ದಿನಕರನ್ ಹಾಗೂ ಬಿ ಎಸ್ ಪಾಟೀಲ್ ನೇತೃತ್ವದ ನ್ಯಾಯಪೀಠ ಇಂದು ವಿಚಾರಣೆ ನಡೆಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಯಾವುದೇ ಹುರುಳಿಲ್ಲ ಎಂದು ಅರ್ಜಿಯನ್ನು ವಜಾ ಗೊಳಿಸಿದೆ. ಅರ್ಜಿಯಲ್ಲಿ ದಾಖಲಿಸಿರುವ ವಿಷಯದಲ್ಲಿ ರಾಜಕೀಯ ಬೆರೆತಿರುವುದು ಸ್ಪಷ್ಟವಾಗಿದ್ದರಿಂದ ಇಂತಹ ಅರ್ಜಿಗಳನ್ನು ವಿಚಾರಣೆಗೆ ಯೋಗ್ಯವಲ್ಲ ಎಂದು ಪರಿಗಣಿಸಿ ವಜಾಗೊಳಿಸಿರುವುದಾಗಿ ನ್ಯಾಯಾಪೀಠ ಹೇಳಿದೆ.
ಅರ್ಜಿದಾರನ ಪ್ರಕಾರ ಈ ಸಂಬಂಧ ಸಿಬಿಐ ತನಿಖೆ ನಡೆಸಬೇಕು ಎನ್ನುವುದನ್ನು ಸ್ಪಷ್ಟವಾಗಿ ನಿರಾಕರಿಸಿರುವ ನ್ಯಾಯಾಲಯ, ಇದಕ್ಕೆ ಬೇಕಿರುವ ಅಗತ್ಯ ಸಾಕ್ಷ್ಯಾಧಾರಗಳನ್ನು ಒದಗಿಸುವಲ್ಲಿ ಅರ್ಜಿದಾರರು ವಿಫಲರಾಗಿದ್ದಾರೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಕರ್ನಾಟಕ ಪೊಲೀಸ್ ಮಹಾಸಂಘದ ಅಧ್ಯಕ್ಷ ವಿ ಶಶಿಧರ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಬಿಜೆಪಿ ಸರ್ಕಾರದ ಏಳು ಸಚಿವರು ಶ್ರೀರಾಮುಲು, ಜನಾರ್ದನರೆಡ್ಡಿ, ಕರುಣಾಕರರೆಡ್ಡಿ, ಕೆ ಎಸ್ ಈಶ್ವರಪ್ಪ, ಕಟ್ಟಾ ಸುಬ್ರಮಣ್ಯ ನಾಯ್ಡು, ಶೋಭಾ ಕರಂದ್ಲಾಜೆ, ಎಸ್ ರವೀಂದ್ರ ನಾಥ್ ಹಾಗೂ ಶಾಸಕರು ವಿಶ್ವನಾಥ್ ರೆಡ್ಡಿ, ಎಂ ಕೃಷ್ಣಪ್ಪ, ಮುನಿರಾಜು, ಆನಂದ್ ಸಿಂಗ್, ನಂದೀಶ್ ರೆಡ್ಡಿ, ಸತೀಶ್ ರೆಡ್ಡಿ, ರೇಣುಕಾಚಾರ್ಯ, ಚಂದ್ರ ಶೇಖರ್ ಪಾಟೀಲ್ ರೇವೂರು, ಎಂ ಶ್ರೀನಿವಾಸ್, ವೀರಣ್ಣ ಚರಂತಿಮಠ, ನೆಹರು ಓಲೇಕಾರ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications