ಪಾಕ್ ವಿರುದ್ದ ಯುದ್ಧ ಇಲ್ಲ, ನಾರಾಯಣನ್
ಇಸ್ಲಾಮಾಬಾದ್, ಡಿ.5 : ಮುಂಬೈ ಭಯೋತ್ಪಾದನೆ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮೇಲೆ ಯುದ್ಧ ಸಾರುವ ಚಿಂತನೆ ಭಾರತ ಮುಂದೆ ಇಲ್ಲ ಎಂದು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ ಕೆ ನಾರಾಯಣನ್ ಜರ್ಮನಿ ಪ್ರಧಾನಿಗಳಿಗೆ ಸ್ಪಷ್ಟಪಡಿಸಿದ್ದಾರೆ.
ಜರ್ಮನಿಯ ರಾಷ್ಟ್ರೀಯ ಸಲಹೆಗಾರ ಹಾಗೂ ವಿದೇಶಾಂಗ ಖಾತೆ ಸಚಿವ ಕ್ರಿಸ್ಟೋಫರ್ ಹ್ಯುಜೆನ್ ಅವರು ಪಾಕಿಸ್ತಾನದ ಪ್ರಧಾನಮಂತ್ರಿಯವರಿಗೆ ದೂರವಾಣಿ ಮೂಲಕ ಈ ವಿಷಯವನ್ನು ತಿಳಿಸಿದ್ದಾರೆ ಎಂದು ಪಾಕ್ ನಲ್ಲಿ ವರದಿಯಾಗಿದೆ. ಮುಂಬೈ ಭಯೋತ್ಪಾದನೆಯಲ್ಲಿ ಪಾಕಿಸ್ತಾನದ ಪ್ರಜೆಗಳು ನಡೆಸಿರುವುದು ಸಾಬೀತಾಗಿದೆ. ಜತೆಗೆ ಪಾಕಿಸ್ತಾನ ಸರ್ಕಾರ ಕೃಪಾಪೋಷಿತ ಸಂಘಟನೆ ಲಷ್ಕರ್ ಇ ತೊಯ್ಬಾ ಸಂಘಟನೆ ದಾಳಿಯಲ್ಲಿ ನೇರ ಕೈವಾಡವಿರುವುದು ತನಿಖೆಯಿಂದ ಗೊತ್ತಾಗಿದೆ.
ಮುಂಬೈ ದಾಳಿಯಲ್ಲಿ ಪೊಲೀಸರ ಕೈಗೆ ಸಿಕ್ಕಿರುವ ಉಗ್ರ ಕಸಬ್ ನೀಡಿರುವ ಮಾಹಿತಿ ಪ್ರಕಾರ ಪಾಕಿಸ್ತಾನದ ಐಎಸ್ ಐ ನ ಕೈವಾಡದಿಂದಲೇ ಈ ಕೃತ್ಯ ಜರುಗಿರುವುದು ತಿಳಿದಿದೆ ಎಂದು ನಾರಾಯಣನ್ ಜರ್ಮನಿ ಅಧಿಕಾರಿಗಳೊಂದಿಗೆ ಸುಧೀರ್ಘ ಚರ್ಚೆಯಲ್ಲಿ ತಿಳಿಸಿದ್ದಾರೆ. ಜರ್ಮನಿಯ ಚಾನ್ಸಲರ್ ಎಂಜಲ್ ಮರ್ಕಲ್ ಸೂಚನೆ ಮೇರೆಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಕ್ರಿಸ್ಟೋಫರ್ ಭಾರತದ ಸಲಹೆಗಾರರನ್ನು ಸಂಪರ್ಕಿಸಿ ಮಾತುಕತೆ ನಡೆಸಿದ್ದಾರೆ.
ಪಾಕಿಸ್ತಾನ ಪದೆಪದೇ ಭಾರತಕ್ಕೆ ಅನೇಕ ಸಮಸ್ಯೆಗಳನ್ನು ತಂದೊಡ್ಡತೊಡಗಿದೆ. ಪರಿಸ್ಥಿತಿ ಹೀಗೆ ಮುಂದುವೆರದಲ್ಲಿ ಭಾರತ ಹಾಗೂ ಭಾರತೀಯರ ಕಾಪಾಡಿಕೊಳ್ಳಲು ಎಂತಹ ನಿರ್ಧಾರ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ ಎಂದು ನಾರಾಯಣನ್ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications