ಎಟಿಎಸ್ ವಿರುದ್ಧ ಶಿವಸೇನೆ ದಾವೆ
ಮುಂಬೈ, ನ. 20 : ಮಾಲೇಗಾಂವ್ ಸ್ಫೋಟಕ್ಕೆ ಸಂಬಂಧಿಸಿದಂತೆ ಹಿಂದು ಸಂಘಟನೆಗಳ ಮುಖಂಡರನ್ನು ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ (ಎಟಿಎಸ್) ದಳದ ಪೊಲೀಸರು ವಿನಾಕಾರಣ ಬಂಧಿಸಿ ತನಿಖೆ ನಡೆಸುತ್ತಿರುವ ಪ್ರಕರಣವನ್ನು ಸಿಐಡಿ ತನಿಖೆಗೆ ಒಳಪಡಿಸಬೇಕು ಎಂದು ಶಿವಸೇನೆ ಮುಂಬೈ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದೆ.
ಸಾಧ್ವಿ ಪ್ರಗ್ಯಾಸಿಂಗ್ ಠಾಕೂರ್ ಅವರನ್ನು ಕಾರಣವಿಲ್ಲದೆ ಬಂಧಿಸಲಾಗಿದೆ. ನ್ಯಾಯಾಂಗ ಬಂಧನದಲ್ಲಿರುವ ಸಾಧ್ವಿಗೆ ತನಿಖೆಯ ನೆಪದಲ್ಲಿ ಚಿತ್ರ ಹಿಂಸೆ ನೀಡಿರುವುದು ಖಂಡನೀಯ ವರ್ತನೆ. ಈ ವಿಷಯವನ್ನು ಪ್ರಗ್ಯಾಸಿಂಗ್ ಕೂಡಾ ನ್ಯಾಯಾಲಯದ ಮುಂದೆ ತೋಡಿಕೊಂಡಿದ್ದಾರೆ. ಹಿಂದು ಪರ ಸಂಘಟನೆಗಳಲ್ಲಿ ಸಕ್ರಿಯರಾಗಿರುವ ಅಮಾಯಕ ಸದಸ್ಯರನ್ನು ಭಯೋತ್ಪಾದನೆ ಹೆಸರಿನಲ್ಲಿ ಬಂಧಿಸಿ ವಿಚಾರಣೆ ಮಾಡುತ್ತಿರುವುದಕ್ಕೆ ದೇಶದಾದ್ಯಂತ ವ್ಯಾಪಕ ಟೀಕೆ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಬಂಧನದಲ್ಲಿರುವ ಸಾಧ್ವಿಗೆ ನೀಡಿರುವ ಚಿತ್ರಹಿಂಸೆಯ ಪ್ರಕರಣವನ್ನು ಶೀಘ್ರ ಸಿಐಡಿ ತನಿಖೆಗೆ ಒಳಪಡಿಸಬೇಕು ಎಂದು ಶಿವಸೇನೆ ಮುಖ್ಯಸ್ಥ ಬಾಳಾ ಠಾಕ್ರೆ ಮುಂಬೈ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದಾರೆ.
ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಕೂಡಾ ಪ್ರಗ್ಯಾಸಿಂಗ್ ಬಂಧನಕ್ಕೆ ತೀವ್ರ ಆಕ್ಷೇಪ ಎತ್ತಿದ್ದರು. ಮಾಲೇಗಾಂವ್ ಸ್ಫೋಟಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಎಟಿಎಸ್ ಪೊಲೀಸರು ಬಹುಸಂಖ್ಯಾತ ಹಿಂದುಗಳ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಅಲ್ಲದೆ ಹಿಂದು ಭಯೋತ್ಪಾದಕರು ಎಂಬ ಪದವನ್ನು ಬಳಸುವುದಕ್ಕೆ ಬಲವಾಗಿ ವಿರೋಧಿಸಿದ್ದರು.
ಇತ್ತ ಮಹಾರಾಷ್ಟ್ರ ಎಟಿಎಸ್ ಪೊಲೀಸರು ಇಂದು ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಲೇಗಾಂವ್ ಸ್ಫೋಟದಲ್ಲಿ ಕೈವಾಡವಿದೆ ಎಂಬ ಆರೋಪದ ಮೇಲೆ ಬಂಧಿನದಲ್ಲಿರುವ ಉತ್ತರ ಪ್ರದೇಶದ ಸ್ವಾಮೀಜಿ ದಯಾನಂದ ಪಾಂಡೆ, ಸಾಧ್ವಿ ಪ್ರಗ್ಯಾಸಿಂಗ್ ಹಾಗೂ ಸಹ ಆರೋಪಿ ಎನ್ನಲಾದ ಸಮೀರ್ ಕುಲಕರ್ಣಿ ಒಂದೇ ವೇದಿಕೆಯಲ್ಲಿರುವ ಚಿತ್ರ ಬಿಡುಗಡೆ ಮಾಡಿರುವುದಕ್ಕೆ ಶಿವಸೇನೆ ಕಣ್ಣನ್ನು ಮತ್ತಷ್ಟು ಕೆಂಪಗಾಗಿಸಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications