ಕೆಎಸ್ಆರ್ ಟಿಸಿ ಯಿಂದ ನೂತನ ಸುವರ್ಣ ಟಿಕೆಟ್
ಬೆಂಗಳೂರು, ನ. 20 : ಪ್ರಯಾಣಿಕರಿಗೆ ಅನುಕೂಲವಾಗುವಂತೆ ರಿಯಾಯಿತಿ ದರದ ಮೂರು ಬಗೆಯ ಸುವರ್ಣ ಕರ್ನಾಟಕ ಟಿಕೆಟ್ ಯೋಜನೆಯನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಆರಂಭಿಸಿದೆ. ಕರ್ನಾಟಕ ರಾಜ್ ರಸ್ತೆ ಸಾರಿಗೆ ಸಂಸ್ಥೆ ಬುಧವಾರ ಸುವರ್ಣ ಟಿಕೆಟ್ ಬಿಡುಗಡೆ ಹಾಗೂ ಹೊಸ ವಿನ್ಯಾಸದಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮದ ವೆಬ್ ಸೈಟ್ ಅಂತರ್ಜಾಲದಲ್ಲಿ ಜಾಹೀರಾತಿಗೆ ಚಾಲನೆ ಮತ್ತು ಬುಕ್ಕಿಂಗ್ ಗೆ ಚಾಲನೆ ನೀಡಿತು.
ರಾಜ್ಯ ರಸ್ತೆ ಸಾರಿದೆ ಸಂಸ್ಥೆಯ ಉಪಾಧ್ಯಕ್ಷ ಜಗ್ಗೇಶ್ ಅಂತರ್ಜಾಲದ ಮೂಲಕ ಜಾಹೀರಾತು ಮತ್ತು ಹೋಟೆಲ್ ಬುಕ್ಕಿಂಗ್ ಗೆ ಚಾಲನೆ ನೀಡಿದರೆ, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶ ಉಪೇಂದ್ರ ತ್ರಿಪಾಠಿ ಸುವರ್ಣ ಕರ್ನಾಟಕ ಟಿಕೆಟ್ ಬಿಡುಗಡೆ ಮಾಡಿದರು.
ಅಲ್ಪಾವಧಿಗೆ ಮತ್ತು ವಾರಾಂತ್ಯದಲ್ಲಿ ದೂರ ಪ್ರಮಾಣ ಮಾಡುವ ಪ್ರಯಾಣಿಕರ ಅನುಕೂಲಕ್ಕಾಗಿ 3 ಮತ್ತು 4 ದಿನಗಳ ಅವಧಿಯ ಮೂರು ಬಗೆಯ ಸುವರ್ಣ ಟಿಕೆಟ್ ಗಳನ್ನು ಬಿಡುಗೆಡೆ ಮಾಡಲಾಗಿದೆ. ಸಾಮಾನ್ಯ ಮತ್ತು ವೇಗದೂರ ಬಸ್ ಗಳಲ್ಲಿ ಪ್ರಯಾಣಿಸಲು ಮೂರು ದಿನದ ಟಿಕೆಟ್ (ಶುಕ್ರವಾರದಿಂದ ಭಾನುವಾರದವರೆಗೆ) 500 ರು.ಗಳು, ಇದೇ ಮಾದರಿ ಬಸ್ ಗಳಲ್ಲಿ 4 ದಿನಗಳ ಸುವರ್ಣ ಟಿಕೆಟ್ ಗೆ (ಸೋಮವಾರದಿಂದ ಗುರುವಾರದವರೆಗೆ) 500 ರು.ಗಳ ಪಾವತಿಸಿ ರಾಜ್ಯಾದ್ಯಂತ ಸಂಚರಿಸಬಹುದು.
ಸಾಮಾನ್ಯ , ವೇಗದೂತ ಬಸ್ ಗಳೂ ಸೇರಿ ಶೀತಲ್ ಬಸ್ ಗಳಲ್ಲಿ ವಾರಾಂತ್ಯದ ಮೂರು ದಿನದ ಪ್ರಯಾಣದ ಟಿಕೆಟ್ ಗೆ 600 ರು.ಗಳನ್ನು ಪಾವತಿಸಿ ಸುವರ್ಣ ಟಿಕೆಟ್ ಪಡೆಯಬಹುದು. ಸಾಮಾನ್ಯ, ವೇಗದೂತ ಶೀತಲ್ ಬಸ್ ಗಳೂ ಸೇರಿದಂತೆ ರಾಜಹಂಸ ಬಸ್ ಗಳಲ್ಲಿ ವಾರಾಂತ್ಯದ 3 ದಿನದ ಟಿಕೆಟ್ ಮತ್ತು ಸೋಮವಾರದಿಂದ ಗುರುವಾರವರೆಗಿನ ಟಿಕೆಟ್ ಗೆ 700 ರು ಪಾವತಿಸಿ ರಾಜ್ಯಾದ್ಯಂತ ಸಂಚರಿಸಬಹುದಾಗಿದೆ. ನಿಗಮದ ವೆಬ್ ಸೈಟ್ ಮೂಲಕ ಹೋಟೆಲ್ ಬುಕ್ಕಿಂಗ್ ಮಾಡುವ ಯೋಜನೆಗೆ ಚಾಲನೆ ನೀಡಲಾಗಿದೆ. ನಿಗಮದ ವೆಬ್ ಸೈಟ್ www.ksrtc.in
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications