ಹುಟ್ಟುಹಬ್ಬ ಆಚರಣೆ ಬೇಡ ಎಂದ ರಜಿನಿ
ಚೆನ್ನೈ, ನ. 19 : ಶ್ರೀಲಂಕಾದಲ್ಲಿರುವ ತಮಿಳರ ಮೇಲೆ ಮಾರಣಹೋಮ ನಡೆಯುತ್ತಿರುವ ಕಠಿಣ ಸಂದರ್ಭದಲ್ಲಿ ಕನ್ನಡಿಗ, ತಮಿಳು ಸೂಪರ್ ಸ್ಟಾರ್ ರಜಿನಿಕಾಂತ್ ಅವರ ಹುಟ್ಟುಹಬ್ಬವನ್ನು ಆಚರಿಸದಿರಲು ರಜಿನಿಕಾಂತ್ ಅಭಿಮಾನಿಗಳ ಸಂಘ ನಿರ್ಧರಿಸಿದೆ. ಡಿ. 12 ಕ್ಕೆ ರಜಿನಿಕಾಂತ್ 58 ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಪ್ರತಿ ವರ್ಷ ರಜಿನಿಕಾಂತ್ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಸಂಘ ಅವರ ಅದ್ಧೂರಿಯಾಗಿ ಆಚರಿಸುತ್ತಿತ್ತು.
ಅಭಿಮಾನಿಗಳ ನಿರ್ಧಾರಕ್ಕೆ ರಜಿನಿಕಾಂತ್ ಸಹಮತ ವ್ಯಕ್ತಪಡಿಸಿದ್ದಾರೆ. ತಮಿಳು ಸಹೋದರರು ನಿತ್ಯ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದರೆ, ಇಲ್ಲಿ ನಾವುಗಳು ಹುಟ್ಟುಹಬ್ಬದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಂಭ್ರಮದಿಂದ ಆಚರಣೆ ಮಾಡುವುದು ಅರ್ಥಹೀನ ಎಂದು ರಜಿನಿಕಾಂತ್ ಹೇಳಿದ್ದಾರೆ. ಸರಳ ರೀತಿಯಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಶ್ರೀಲಂಕಾದಲ್ಲಿ ತಮಿಳರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಮಿಳುನಾಡಿನ ಜನರಿಗೆ ಭರಿಸಲಾಗದ ದುಃಖ ತಂದಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಹುಟ್ಟಹಬ್ಬವನ್ನು ಆಚರಿಸುವುದು ಸರಿಯಲ್ಲ. ಆದ್ದರಿಂದ ಡಿ. 12 ರಂದು ರಜಿನಿಕಾಂತ್ ಅವರ ಹುಟ್ಟುಹಬ್ಬವನ್ನು ಈ ವರ್ಷ ಆಚರಿಸುವುದಿಲ್ಲ ಎಂದು ರಜಿನಿಕಾಂತ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸುಧಾಕರ್ ತಿಳಿಸಿದ್ದಾರೆ. ಕಳೆದ ನ.7 ರಂದು ಬಹುಭಾಷಾ ನಟ ಕಮಲ್ ಹಾಸನ್ ಅವರ ಹುಟ್ಟುಹಬ್ಬವನ್ನು ಕೂಡಾ ಇದೇ ಕಾರಣಕ್ಕೆ ಅದ್ಧೂರಿಯಾಗಿ ಆಚರಿಸದಿರಲು ನಿರ್ಧರಿಸಲಾಗಿತ್ತು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications