ಜೆಡಿಎಸ್ ಕಾಂಗ್ರೆಸ್ ಗೆ ಭವಿಷ್ಯವಿಲ್ಲ, :ಬಿಜೆಪಿ
ಬೆಂಗಳೂರು, ನ. 19 : ಬಿಜೆಪಿ ಸರ್ಕಾರದ ಸಚಿವರ ಸಾಧನೆಯನ್ನು ಡಿಸೆಂಬರ್ ಎರಡನೇ ವಾರದಲ್ಲಿ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದಗೌಡ ಹೇಳಿದರು. ಜೆಡಿಎಸ್ ಕಾಯಕಲ್ಪ ಸಮಾವೇಶಕ್ಕೆ ಪ್ರತಿಕ್ರಿಯಿಸಿದ ಅವರು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಭವಿಷ್ಯವಿಲ್ಲ ಎಂದು ಟೀಕಿಸಿದರು.
ಮೂರು ತಿಂಗಳಿಗೊಮ್ಮೆ ಸಚಿವರ ಸಾಧನೆಯನ್ನು ಪರಾಮರ್ಶೆ ಮಾಡಿ ಸಲಹೆ ಸೂಚನೆ ನೀಡಲು ನಿರ್ಧರಿಸಲಾಗಿತ್ತು. ಆದರೆ, ಮೂರು ತಿಂಗಳಿಗೆ ಸಾಧನೆಯನ್ನು ಒರೆಗಲ್ಲಿಗೆ ಹಚ್ಚಲು ಕಷ್ಟವಾಗಿದ್ದರಿಂದ ಅವಧಿಯನ್ನು ಆರು ತಿಂಗಳಿಗೆ ಹೆಚ್ಚಿಸಲಾಗಿದೆ ಎಂದರು. ಕೇಂದ್ರ ಮುಖಂಡರ ಸಮ್ಮುಖದಲ್ಲಿ ಈ ಪ್ರಕ್ರಿಯೆ ನಡೆಸಲಿದೆ ಎಂದು ಹೇಳಿದರು. ಉಪಚುನಾವಣೆ ನಂತರ ನಿಗಮ ಮಂಡಳಿ ನೇಮಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು. ಆಕಾಂಕ್ಷಿಗಳ ಪಟ್ಟಿ ಐದಾರು ಪಟ್ಟು ಹೆಚ್ಚಿದ್ದರಿಂದ ಯಾರಿಗೂ ಅಸಮಾಧಾನವಾಗದಂತೆ ನೇಮಕ ಮಾಡಿಕೊಳ್ಳುವ ಸವಾಲು ನಮ್ಮ ಮುಂದಿದೆ ಎಂದು ವಿವರಿಸಿದರು. ರಾಜ್ಯದ ಜನತೆ ಸರ್ಕಾರದ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈವರೆಗಿನ ಸರ್ಕಾರದ ಸಾಧನೆ ಹೇಳಿಕೊಳ್ಳುವ ಮಟ್ಟದಲ್ಲಿ ನಡೆದಿಲ್ಲ. ಮುಂದಿನ ದಿನದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚುರುಕು ಮುಟ್ಟಿಸಿ ಉತ್ತಮ ಕಾರ್ಯಗಳಿಗೆ ಸರ್ಕಾರ ಮುಂದಾಗಬೇಕು ಎಂದು ಅಬಿಪ್ರಾಯಪಟ್ಟರು.
ಜೆಡಿಎಸ್ ಪಕ್ಷದ ಹಣೆಬರಹ ಏನು ಎಂಬುದು ಕಳೆದ ಚುನಾವಣೆಯಲ್ಲಿ ಸಾಬೀತಾಗಿದೆ. ಕಾಂಗ್ರೆಸ್ ಕೂಡಾ ಇದಕ್ಕೆ ಹೊರತಲ್ಲ. ಆ ಪಕ್ಷದಲ್ಲಿರುವ ಆಂತರಿಕ ಸಮಸ್ಯೆಯಿಂದ ಪಕ್ಷ ದಿನದಿಂದ ದಿನಕ್ಕೆ ನಶಿಸತೊಡಗಿದೆ. ಆದ್ದರಿಂದ ಈ ಎರಡು ಪಕ್ಷಗಳಿಗೆ ಎಂದಿಗೂ ರಾಜ್ಯದ ಮತದಾರ ಬೆಲೆ ಕೂಡುವುದಿಲ್ಲ ಎಂದು ಸದಾನಂದಗೌಡ ಲೇವಡಿ ಮಾಡಿದರು. ಕುಮಾರಸ್ವಾಮಿ ರಾಜ್ಯಾಧ್ಯಕ್ಷ ಆದರೂ ಯವುದೇ ಲಾಭ ಆಗುವುದಿಲ್ಲ ಎಂದು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications