ಇನ್ಫೋಸಿಸ್ ನಲ್ಲಿ ಮತ್ತಷ್ಟು ನೌಕರರ ನೇಮಕ
ನವದೆಹಲಿ, ನ.16: ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಪರಿಣಾಮ ಸಾಲು ಸಾಲು ಕಂಪನಿಗಳು ಸಿಬ್ಬಂದಿ ಕಡಿತಕ್ಕೆ ಮುಂದಾವೆ. ಆದರೆ ಇನ್ಫೋಸಿಸ್ ಕಂಪನಿ ಮಾತ್ರ ಮತ್ತಷ್ಟು ನೌಕರರನ್ನು ನೇಮಿಸಿಕೊಳ್ಳುವುದಾಗಿ ಪ್ರಕಟಿಸಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಆಶ್ಚರ್ಯ ಮೂಡಿಸಿದೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಇನ್ಫೋಸಿಸ್ ಟೆಕ್ನಾಲಜಿ ಸಹ ಸಂಸ್ಥಾಪಕ ನಂದನ್ ನೀಲೇಕಣಿ, ಆರ್ಥಿಕ ಬಿಕ್ಕಟ್ಟಿನಿಂದಾಗಿ ಒಟ್ಟಾರೆಯಾಗಿ ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಕುಸಿತ ಉಂಟಾಗಿದೆ. ಬಹಳಷ್ಟು ಕಂಪನಿಗಳು ಇದರಿಂದ ಹೊರಬರಲು ಸಿಬ್ಬಂದಿ ಕಡಿತಕ್ಕ್ಕೆ ಮುಂದಾದವು. ಆದರೆ ನಮ್ಮ ಕಂಪನಿ ಮಾತ್ರ ಯೋಜನೆಯಂತೆ ಮತ್ತಷ್ಟು ನೌಕರರನ್ನು ನೇಮಿಸಿಕೊಳ್ಳಲಿದೆ. ಜಾಗತಿಕ ಆರ್ಥಿಕ ಬಿಕ್ಕಟು ಈಗಾಗಲೇ ಸಾಕಷ್ಟು ನಷ್ಟ ತಂದೊಡ್ಡಿದೆ. ಇನ್ನೇನಿದ್ದರೂ ಅದರ ಪರಿಣಾಮ ಅಲ್ಪ ಮಟ್ಟದಲ್ಲಿರುತ್ತದೆ.ಕಳೆದ ನಾಲ್ಕು ವರ್ಷಗಳಿಗೆ ಹೋಲಿಸಿದರೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಐಟಿ ವಲಯ ಸಾಕಷ್ಟು ನಷ್ಟ ಅನುಭವಿಸಿದೆ ಎಂದರು.
ಅಮೆರಿಕಾ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬರಾಕ್ ಒಬಾಮಾ ಹಾಗೂ ಹೊರಗುತ್ತಿಗೆ ಬಗ್ಗೆ ಪ್ರಶ್ನಿಸಲಾಗಿ, ಭಾರತ 'ಕಾದು ನೋಡುವ' ನೀತಿಯನ್ನು ಅನುಸರಿಸುತ್ತಿದೆ. ಒಬಾಮಾ ಯಾವ ನೀತಿಗಳನ್ನು ಜಾರಿಗೊಳಿಸುತ್ತಾನೆ ಎಂಬುದನ್ನು ಕಾದು ನೋಡೋಣ ಎಂದು ಉತ್ತರಿಸಿದರು.
ಇನ್ಫಿ ಹಾದಿಯಲ್ಲಿ ಟಿಸಿಎಸ್
ಇನ್ಫೋಸಿಸ್ ಕಂಪನಿಯ ಹಾದಿಯಲ್ಲೇ ಭಾರತದ ಅತಿ ದೊಡ್ಡ ಐಟಿ ಕಂಪನಿ ಟಾಟಾ ಕನ್ನಲ್ಟೆನ್ಸಿ ಸರ್ವಿಸಸ್ ಸಹ ಮುನ್ನಡೆದಿದೆ. ಟಿಸಿಎಸ್ ಹೊಸದಾಗಿ 30,000-35,000 ನೌಕರರನ್ನು ನೇಮಿಸಿಕೊಳ್ಳಲಿದೆ (ಈಗಾಗಲೇ 18,000 ನೌಕರರನ್ನು ನೇಮಿಸಿಕೊಂಡಿದೆ). ಪ್ರಸಕ್ತ ಆರ್ಥಿಕ ವರ್ಷದಲ್ಲಿ ಐಟಿ ಹಾಗೂ ಐಟಿ ಆಧಾರಿತ ಉದ್ಯಮಗಳಲ್ಲಿ 2 ಲಕ್ಷ ನೌಕರರ ಕುಸಿತ ಉಂಟಾಗಲಿದೆ ಹಾಗೆಯೇ ವೇತನ ಏರಿಕೆಯಲ್ಲೂ ಶೇ.2.5ರಷ್ಟು ಕಡಿಮೆಯಾಗುತ್ತದೆ ಎಂದು ನಾಸ್ ಕಾಮ್ ಈ ಮುಂಚೆ ಪ್ರಕಟಿಸಿತ್ತು.
(ಯುಎನ್ ಐ)












Click it and Unblock the Notifications