ಶ್ರೀಕೃಷ್ಣದೇವರಾಯ ಪ್ರಶಸ್ತಿ ಸ್ಥಾಪಿಸಲು ನಿರ್ಧಾರ
ಹಂಪಿ, ನ.6: ವಿಜಯನಗರ ಸಾಮ್ರಾಜ್ಯದ ಸುಪ್ರಸಿದ್ಧ ಅರಸ ಶ್ರೀಕೃಷ್ಣದೇವರಾಯರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಶ್ರೀಕೃಷ್ಣದೇವರಾಯರ 500ನೇ ವಾರ್ಷಿಕೋತ್ಸವ ಸ್ಮರಣಾರ್ಥ ಪ್ರಶಸ್ತಿ ಸ್ಥಾಪಿಸಲಾಗುತ್ತದೆ ಎಂದು ಪ್ರವಾಸೋದ್ಯಮ ಸಚಿವ ಜಿ.ಜನಾರ್ಧನ ರೆಡ್ಡಿ ತಿಳಿಸಿದ್ದಾರೆ.
ಹಂಪಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಚಿವರು, ಪ್ರಶಸ್ತಿಯನ್ನು ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಸಂಗೀತ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಹನಿಯರಿಗೆ ನೀಡಿ ಗೌರವಿಸಲಾಗುತ್ತದೆ ಎಂದರು. ಶೀಘ್ರದಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧ್ಯುಕ್ತವಾಗಿ ಶ್ರೀಕೃಷ್ಣದೇವರಾಯ ಪ್ರಶಸ್ತಿ ಪ್ರಕಟಿಸಲಿದ್ದಾರೆ ಎಂದು ವಿವರ ನೀಡಿದರು.
ಸರ್ಕಾರ ಶ್ರೀಕೃಷ್ಣದೇವರಾಯರ ವಾರ್ಷಿಕೋತ್ಸವ ಆಚರಿಸಲು ಉಪಸಮಿತಿಯನ್ನು ರಚಿಸಲಿದ್ದು ಅದಾದ ಕೂಡಲೆ ಪ್ರಶಸ್ತಿ ಆಯ್ಕೆ ಸಮಿತಿಯನ್ನು ರಚಿಸಲಾಗುತ್ತದೆ ಎಂದು ಜನಾರ್ಧನ ರೆಡ್ಡಿ ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications