ಮಹಾರಾಷ್ಟ್ರ ರಾಜಕೀಯ ಪಕ್ಷಗಳಿಗೆ ಠಾಕ್ರೆ ಸಲಹೆ
ಮುಂಬೈ, ಅ. 23 : ರೈಲ್ವೆ ಇಲಾಖೆಯಲ್ಲಿ ಸ್ಥಳೀಯರಿಗೆ ಅವಕಾಶ ಕಲ್ಪಿಸದ ನೀತಿಯನ್ನು ಖಂಡಿಸಿ ಮಹಾರಾಷ್ಟ್ರದಲ್ಲಿ ನಡೆಸಿರುವ ಹೋರಾಟ ಸಮರ್ಥಿಸಿಕೊಂಡಿರುವ ಶಿವಸೇನಾ ಮುಖ್ಯಸ್ಥ ಬಾಳಾ ಠಾಕ್ರೆ, ಈ ನಿಟ್ಟಿನಲ್ಲಿ ತಮಿಳುನಾಡಿನ ರಾಜಕೀಯ ಪಕ್ಷಗಳನ್ನು ಹಾಗೂ ಮುಖಂಡರನ್ನು ನೋಡಿ ಕಲಿಯುವುದು ಸಾಕಷ್ಟಿದೆ ಎಂದಿದ್ದಾರೆ.
ಶ್ರೀಲಂಕಾದಲ್ಲಿ ತಮಿಳರಿಗೆ ತೊಂದರೆಯಾಗುತ್ತಿದೆ ಎಂದು ಅರಿವಾಗುತ್ತಲೇ ತಮಿಳುನಾಡಿನಲ್ಲಿರುವ ಡಿಎಂಕೆ ಸರ್ಕಾರ ಅವರ ಪರ ಹೋರಾಟಕ್ಕೆ ನಿಂತಿತು. ತಮಿಳರಿಗೆ ರಕ್ಷಣೆ ನೀಡಲು ಕೇಂದ್ರ ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸದಿದ್ದರೆ ಯುಪಿಎಗೆ ನೀಡಿರುವ ಬೆಂಬಲ ವಾಪಸ್ಸು ಪಡೆಯುವ ಬೆದರಿಕೆಯನ್ನೂ ಹಾಕಿತು. ಅದನ್ನು ಮಹಾರಾಷ್ಟ್ರ ರಾಜಕಾರಣಿಗಳು ಕಲಿಯಬೇಕಿದೆ ಎಂದು ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಬರೆದ ಸಂಪಾದಕೀಯದಲ್ಲಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ತಮಿಳುನಾಡಿನ ರಾಜಕೀಯ ಪಕ್ಷಗಳು ಅತ್ಯಂತ ಸೂಕ್ಷ್ಮ ಮನೋಭಾವನೆಯನ್ನು ಹೊಂದಿವೆ. ಪರರಾಷ್ಟ್ರದಲ್ಲಿನ ತಮಿಳರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತವೆ. ಆದರೆ ಮಹಾರಾಷ್ಟ್ರದಲ್ಲಿ ಮರಾಠಿಗರಿಗೆ ನಾವು ಬೆಂಬಲ ವ್ಯಕ್ತಪಡಿಸಿದರೆ ವಿರುದ್ಧ ಹೇಳಿಕೆ ನೀಡಲಾಗುತ್ತಿದೆ. ನಮ್ಮ ವಿರುದ್ಧ ಪ್ರಾಂತೀಯ ಹಣೆಪಟ್ಟಿಯನ್ನು ಕಟ್ಟಲಾಗುತ್ತಿದೆ ಎಂದು ಬಾಳಾ ಠಾಕ್ರೆ ಆರೋಪಿಸಿದ್ದಾರೆ. ಮಹಾರಾಷ್ಟ್ರದಲ್ಲಿ ನಡೆಯಬೇಕಿದ್ದ ರೈಲ್ವೆ ಪರೀಕ್ಷೆಯನ್ನು ನಿಲ್ಲಿಸಿದ್ದು ಶಿವಸೇನೆ ಕಾರ್ಯಕರ್ತರೇ ಹೊರತು, ನವನಿರ್ಮಾಣ ಸೇನೆಯವರಲ್ಲ ಎಂದು ಠಾಕ್ರೆ ಸ್ಪಷ್ಟಪಡಿಸಿದ್ದಾರೆ.
(ಏಜೆನ್ಸೀಸ್)












Click it and Unblock the Notifications