ಸರ್ಕಾರ ಎಳೆಮನಗಳಲ್ಲಿ ವಿಶ್ವ ಭಾತೃತ್ವದ ಬೀಜ ಬಿತ್ತಲಿ
ಬೆಂಗಳೂರು, ಸೆ. 13 : ಜಾತಿ-ಮತಗಳ ಹೆಸರಿನಲ್ಲಿ ಯಾರನ್ನೂ ದ್ವೇಷಿಸದೆ ಎಲ್ಲರನ್ನೂ ಪ್ರೀತಿಸಿ, ವಿಶ್ವವೆಲ್ಲವೂ ಒಂದೇ ಮನೆಯೆಂಬ ವಿಶ್ವ ಭಾತೃತ್ವದ ಬೀಜವನ್ನು ಎಳೆಮನಗಳಲ್ಲಿ ಸರ್ಕಾರ ಬಿತ್ತಲಿ ಎಂದು ಕೇಂದ್ರ ಬಂದರು, ರಸ್ತೆ ಸಾರಿಗೆ ಮತ್ತು ಹೆದ್ದಾರಿಯ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.
ಇಂದು ಅರಮನೆ ಆವರಣದಲ್ಲಿ ಶ್ರೀ ಸತ್ಯಸಾಯಿ ಸಂಸ್ಥೆ ಆಯೋಜಿಸಿರುವ ಪ್ರೇಮ ಜ್ಯೋತಿ ಎಂಬ ಬಿತ್ತಿ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಸಚಿವರು, ಬಾಬಾರವರು ತಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಒತ್ತು ನೀಡುತ್ತಿರುವ ಮಾನವೀಯ ಮೌಲ್ಯಗಳು ವಿಶ್ವದ ಎಲ್ಲ ಮಕ್ಕಳಿಗೂ ದೊರೆತಲ್ಲಿ ಅತೀತ ಸಂಘರ್ಷಗಳು ಕಾಣೆಯಾಗುವುದೆಂದರು.
ವಿಷಯ ತಂತ್ರಜ್ಞಾನಗಳ ಜೊತೆಗೆ ವಿದ್ಯಾರ್ಥಿಗಳಿಗೆ ವಿವೇಕವನ್ನು ರೂಢಿಸಿಕೊಳ್ಳಬೇಕೆಂಬ ಹಂಬಲ ವೃದ್ಧಿಯಾಗಬೇಕು. ಕುಡಿಯುವ ನೀರಿನ ಯೋಜನೆ ಮತ್ತು ಹಲವು ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಬಾಬಾ ಅವರು ತೋರಿರುವಂಥ ನಿಸ್ವಾರ್ಥ ಸೇವೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಯುವಜನತೆಗೆ ಈ ಚಿತ್ರ ಪ್ರದರ್ಶನ ಸಹಾಯಕವಾಗಲಿದೆ ಎಂದು ತಿಳಿಸಿದರು.
ಬಾಹ್ಯ ಜಾತ್ಯತೀತ ಪದ್ಧತಿ ಹಾಗೂ ಆಂತರಿಕ ಆಧ್ಯಾತ್ಮಕ ಪದ್ಧತಿಗಳ ಮಧುರ ಮಿಶ್ರಣವಾದ ಎಜುಕೇರ್ ಸಮಾಜದ ಸಂತುಲಿತ ಪ್ರಗತಿಗೆ ದಾರಿಯಾಗುವುದೆಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅಭಿಪ್ರಾಯಪಟ್ಟರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications