ಸೆ. 12 ರಿಂದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ
ಬೆಂಗಳೂರು, ಸೆ. 11 : ನಾಳೆಯಿಂದ ನಗರದಲ್ಲಿ ಬಿಜೆಪಿ ಕಾರ್ಯಕಾರಿಣಿ ನಡೆಯಲಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆದ್ದು ಕೇಂದ್ರದಲ್ಲಿ ಸರ್ಕಾರ ರಚಿಸುವ ಉತ್ಸಾಹದಲ್ಲಿರುವ ಬಿಜೆಪಿ ಚುನಾವಣೆಯ ರಣನೀತಿಯನ್ನು ರೂಪಿಸುವ ಸಾಧ್ಯೆತೆ ಇದೆ.
ಮೂರು ದಿನಗಳ ಕಾಲ ನಡೆಯಲಿರುವ ಕಾರ್ಯಕಾರಣಿಯಲ್ಲಿ ಪಕ್ಷದ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ, ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಸೇರಿದಂತೆ ಅನೇಕ ನಾಯಕರು ಪಾಲ್ಗೊಳ್ಳಲಿದ್ದಾರೆ. ಒಂದೂವರೆ ವರ್ಷದಿಂದ ಚುನಾವಣೆಯ ಮಂತ್ರ ಪಠಿಸುತ್ತ ಎನ್ ಡಿಎ ಬಲಗೊಳಿಸಲು ಮಗ್ನವಾಗಿರುವ ಬಿಜೆಪಿ ನಾಯಕರಿಗೆ ಕಾರ್ಯಕಾರಿ ಸಭೆ ಮಹತ್ವದ್ದು ಎನ್ನಲಾಗಿದೆ.
ಹಣದುಬ್ಬರ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಆಹಾರ ಧಾನ್ಯಗಳ ಕೊರತೆ, ಭಯೋತ್ಪಾದನೆ, ಅಣು ಒಪ್ಪಂದ ಮೂದಲಾದ ಸಮಸ್ಯೆಗಳ ಮಧ್ಯೆ ಸಿಲುಕಿ ಕೇಂದ್ರದ ಯುಪಿಎ ನಲುಗಿದೆ. ಈ ಎಲ್ಲ ವಿಷಯಗಳನ್ನು ಪ್ರಮುಖವಾಗಿ ಇಟ್ಟುಕೊಂಡು ಕೇಂದ್ರ ಸರ್ಕಾರದ ಮೇಲೆ ವಾಗ್ಧಾಳಿ ನಡೆಸುವ ಸಂಬಂಧ ಕಾರ್ಯಕಾರಿಣಿಯಲ್ಲಿ ನಿರ್ಣಯ ತೆಗೆದುಕೊಳ್ಳುವ ನಿರೀಕ್ಷೆಯಿದೆ. ಲೋಕಸಭೆಗೆ ಯಾವ ಕ್ಷಣದಲ್ಲಾದರೂ ಚುನಾವಣೆ ಎದುರಾಗಬಹುದು ಎನ್ನುವ ನಿರೀಕ್ಷೆಯಿಂದ ಚುನಾವಣೆ ಅಧಿಸೂಚನೆ ಹೊರಡಿಸುವ ಮೊದಲೇ ಕ್ಷೇತ್ರವಾರು ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ನಿರ್ಣಯ ತಗೆದುಕೊಳ್ಳುವ ಸಾಧ್ಯತೆ ಇದೆ.
ನರೇಂದ್ರ ಮೋದಿ, ವಸುಂಧರಾ ರಾಜೇ, ರಮಣ್ ಸಿಂಗ್ ಸೇರಿದಂತೆ ಬಿಜೆಪಿ ಸರ್ಕಾರ ಇರುವ ಏಳು ರಾಜ್ಯಗಳ ಮುಖ್ಯಮಂತ್ರಿಗಳು, ಮೂವರು ಉಪಮುಖ್ಯಮಂತ್ರಿಗಳು, ಎಲ್ಲ ರಾಜ್ಯಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಸಂಘಟನಾ ಕಾರ್ಯದರ್ಶಿಗಳು, ಕಾರ್ಯಕಾರಿಣಿ ಸದಸ್ಯರು ಸೇರಿ ಒಟ್ಟು 120 ಮಂದಿ ಆಗಮಿಸುವ ನಿರೀಕ್ಷೆ ಇದೆ.
ವುಡ್ ಲ್ಯಾಂಡ್ಸ್ ನಲ್ಲಿ ಮಾಧ್ಯಮ ಕೇಂದ್ರ
ಕಾರ್ಯಕಾರಿಣಿ ಕುರಿತು ವರದಿ ಮಾಡಲು ದಿಲ್ಲಿ ಹಾಗೂ ಬೇರೆ ಬೇರೆ ರಾಜ್ಯಗಳಿಂದ ಮುದ್ರಣ ಹಾಗೂ ಸುದ್ದಿ ವಾಹಿನಿಗಳ 120 ಕ್ಕೂ ಹೆಚ್ಚು ಪ್ರತಿನಿಧಿಗಳು ಆಗಮಿಸಲಿದ್ದಾರೆ. ಎಲ್ಲರಿಗೂ ವುಡ್ ಲ್ಯಾಂಡ್ಸ್ ಹೋಟೆಲ್ ನಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕಾರಿಣಿಯು ಹೋಟೇಲ್ ಚಾನ್ಸರಿಯಲ್ಲಿ ನಡೆಯಲಿದೆ. ವುಡ್ ಲ್ಯಾಂಡ್ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿಗಳಲ್ಲಿ ನಡೆಯಲಿವೆ. ಸುದ್ದಿ ಮಾಧ್ಯಮದರಿಗೆ ಅನುಕೂಲಕ್ಕಾಗಿ ವುಡ್ ಲ್ಯಾಂಡ್ ಹೋಟೆಲ್ ನಲ್ಲಿ ಮಾದ್ಯಮ ಕೇಂದ್ರವನ್ನು ತೆರೆಯಲಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications