ಕುಣಿಗಲ್ ದೊಡ್ಡಕೆರೆ ಒತ್ತುವರಿಗೆ ತೀವ್ರ ವಿರೋಧ
ಕುಣಿಗಲ್, ಸೆ. 8 : ಪಟ್ಟಣದ ಐತಿಹಾಸಿಕ ದೊಡ್ಡಕೆರೆ ಒತ್ತುವರಿಯನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕನ್ನಡ ಪರ ಸಂಘಟನೆಗಳು ಸೆ.8ರಂದು ನೀಡಿರುವ ಕುಣಿಗಲ್ ಬಂದ್ ಕರೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಸಾರ್ವಜನಿಕರು ಹಾಗೂ ವರ್ತಕರು ಸ್ವಯಂ ಪ್ರೇರಿತರಾಗಿ ಬಂದ್ ಗೆ ಬೆಂಬಲ ಸೂಚಿಸಿದ್ದಾರೆ. ಬಂದ್ ಕಾರಣ ಶಾಲಾ ಕಾಲೇಜುಗಳಿಗೆ ಸೋಮವಾರ ರಜೆ ಘೋಷಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸುತ್ತಿರುವ ಪ್ರತಿಭಟನಾಕಾರರು ಸರ್ಕಾರದ ಧೋರಣೆಯನ್ನು ಖಂಡಿಸಿದ್ದಾರೆ. ದೊಡ್ಡಕೆರೆ ಒತ್ತುವರಿ ಶೀಘ್ರದಲ್ಲಿ ತಡೆಯುವುದರ ಜೊತೆಗೆ ಒತ್ತುವರಿಯಾಗಿರುವ ಸ್ಥಳವನ್ನು ವಶಪಡಿಸಿಕೊಳ್ಳಬೇಕೆಂದು ಪ್ರತಿಭಟನಾಕಾರರು ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಪಟ್ಟಣದ ದೊಡ್ಡ ಕೆರೆ ಅನೇಕ ದಿನಗಳಿಂದ ಒತ್ತುವರಿಯಾಗುತ್ತಿದ್ದು, ಇದನ್ನು ತಡೆಯುವಂತೆ ಅನೇಕ ಸಲ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಆದರೆ ಯಾವ ಪ್ರಯೋಜನವು ಆಗಿಲ್ಲ. ಕೆರೆ ಒತ್ತುವರಿಯಾಗಿರುವ ವಿಷಯ ಅವ್ಯಾಹತವಾಗಿ ನಡೆದಿರುವ ವಿಷಯ ಇತ್ತೀಚೆಗೆ ನಡೆದ ಸಮೀಕ್ಷೆಯಿಂದ ಬೆಳಕಿಗೆ ಬಂತು. ಇಷ್ಟಾದರೂ ಸರ್ಕಾರ ಮಾತ್ರ ದಿವ್ಯ ನಿರ್ಲಕ್ಷ್ಯ ತಾಳಿದೆ. ಆದ್ದರಿಂದ ಕೂಡಲೇ ದೊಡ್ಡಕೆರೆ ಒತ್ತುವರಿ ತೆರವು ಕಾರ್ಯಕ್ರಮಕ್ಕೆ ಶೀಘ್ರ ಚಾಲನೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications