ಮತಾಂತರ ಆರೋಪ:ಬಾಡಾ ಗ್ರಾಮದ ಚರ್ಚ್ ಧ್ವಂಸ
ದಾವಣಗೆರೆ, ಸೆ.8: ಹಿಂದೂಗಳನ್ನು ಬಲವಂತವಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ ಎಂದು ಆರೋಪಿಸಿ ದಾವಣಗೆರೆ ಜಿಲ್ಲೆಯ ಬಾಡಾ ಗ್ರಾಮಸ್ಥರು ಭಾನುವಾರ ಚರ್ಚ್ ಮೇಲೆ ಏಕಾಏಕಿ ದಾಳಿ ನಡೆಸಿ ಅಲ್ಲಿನ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ ಘಟನೆ ನಡೆದಿದೆ.
ದಾವಣಗೆರೆಯಿಂದ 28 ಕಿ.ಮೀ ದೂರದಲ್ಲಿರುವ ಬಾಡಾ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಗ್ರಾಮದಲ್ಲಿ ಪೊಲೀಸ್ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದೆ. ಪ್ರತಿಭಟನೆಯಲ್ಲಿ ನಿರತರಾಗಿದ್ದ ಜನರನ್ನು ನಿಯಂತ್ರಿಸಲು ಲಘು ಲಾಠಿ ಪ್ರಹಾರ ನಡೆಸಲಾಯಿತು. ಈ ಸಂಬಂಧ 10 ಜನರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಮತ್ತಷ್ಟು ಮಂದಿಯನ್ನು ಬಂಧಿಸುವ ಸಾಧ್ಯತೆಯಿದೆ.
ಗ್ರಾಮದ ಹೊರವಲಯದಲ್ಲಿರುವ ಚರ್ಚ್ ಮೇಲೆ ಗ್ರಾಮಸ್ಥರು ಭಾನುವಾರ ಬೆಳಗ್ಗೆ ಸುಮಾರು 9 ಗಂಟೆ ಸಮಯದಲ್ಲಿ ಏಕಾಏಕಿ ದಾಳಿ ನಡೆಸಿದರು. ಚರ್ಚ್ ನಲ್ಲಿದ್ದ ಪೀಠೋಪಕರಣ, ಧರ್ಮ ಗ್ರಂಥಗಳು, ಕಿಟಕಿ, ಬಾಗಿಲುಗಳನ್ನು ನಾಶ ಪಡಿಸಿ ಬೆಂಕಿ ಹಚ್ಚಿದರು. ಚರ್ಚ್ ನ ಸುತ್ತ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಗುರುಶಾಂತಪ್ಪ, ಗ್ರಾಮಪಂಚಾಯಿತಿ ಸದಸ್ಯ ಗಿರಿದಾಸ್, ಉಪಾಧ್ಯಕ್ಷ ರುದ್ರಸ್ವಾಮಿ, ಸದಸ್ಯ ಗಾಳಿ ಬಸಣ್ಣ ಸೇರಿದಂತೆ ಒಟ್ಟು 11 ಮಂದಿಯನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಅವರನ್ನು ಜೆ ಎಂ ಎಫ್ ಸಿ ನ್ಯಾಯಾಧೀಶರ ಎದಿರು ಹಾಜರುಪಡಿಸಿದರು.
ಘಟನೆಗೆ ಕಾರಣ ಏನು?
ಕಳೆದ ಹಲವಾರು ವರ್ಷಗಳಿಂದ ಮತಾಂತರ ಕಾರ್ಯ ನಡೆಯುತ್ತಿದ್ದು ಇದುವರೆಗೂ 300ಕ್ಕೂ ಹೆಚ್ಚು ಅಮಾಯಕ ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲಾಗಿದೆ. ಮತಾಂತರಕ್ಕೆ ಆಮೀಷ ಒಡ್ಡುತ್ತಿದ್ದು ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಈ ಆರೋಪವನ್ನು ತಳ್ಳಿಹಾಕಿರುವ ಫಾಸ್ಟರ್ ಲೂಕಾಸ್, 1991ರಿಂದ ಇಲ್ಲಿ ಧರ್ಮ ತತ್ವಗಳನ್ನು ಬೋಧಿಸುತ್ತಿದ್ದೇವೆ. ಇಲ್ಲಿ ಯಾವುದೇ ಮತಾಂತರ ಕಾರ್ಯ ನಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications