ಬಿಎಂಡಬ್ಲ್ಯು ಪ್ರಕರಣ ನಂದಾಗೆ ಐದು ವರ್ಷ ಜೈಲು
ನವದೆಹಲಿ, ಸೆ. 5 : ಭಾರಿ ಕುತೂಹಲ ಕೆರಳಿಸಿದ್ದ ಬಿಎಂಡಬ್ಲೂ ಹಿಟ್ ಅಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಯಾಗಿದ್ದ ಸಂಜೀವ ನಂದಾ ಅವರಿಗೆ ದೆಹಲಿಯ ಹೈಕೋರ್ಟ್ ಐದು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ದೆಹಲಿ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶ ವಿನೋದ್ ಕುಮಾರ್ ನೇತೃತ್ವದ ಏಕ ಸದಸ್ಯ ಪೀಠವು ಕಳೆದ ಮಂಗಳವಾರ ಅಂತಿಮ ಹಂತದ ವಿಚಾರಣೆ ನಡೆಸಿ ಕಲಂ 304(2)ರ ಅಡಿಯಲ್ಲಿ ಸಂಜೀವ ನಂದಾ ಅಪರಾಧಿ ಎಂದು ತೀರ್ಪು ನೀಡಿತ್ತು. ಶಿಕ್ಷೆ ಪ್ರಮಾಣವನ್ನು ಸೆ.3 ರಂದು ಘೋಷಿಸಲಾಗುವುದು ಎಂದು ನ್ಯಾಯಾಲಯ ಹೇಳಿತ್ತು. ಸೆ. 3 ಘೋಷಿಸಬೇಕಿದ್ದ ಶಿಕ್ಷೆ ಪ್ರಮಾಣದ ತೀರ್ಪನ್ನು ಸೆ. 5ಕ್ಕೆ ಮುಂದೂಡಿತ್ತು. ಇಂದು ನ್ಯಾಯಾಲಯ ಸಂಜೀವ ನಂದಾ ಅವರಿಗೆ 5 ವರ್ಷಗಳ ಸೆರೆವಾಸ ಶಿಕ್ಷೆ ಘೋಷಿಸಿದೆ. ಸಾಕ್ಷಿ ನಾಶಪಡಿಸಿದ ಹಿನ್ನೆಲೆಯಲ್ಲಿ ಸಂಜೀವ ನಂದಾ ಸ್ನೇಹಿತ ರಾಜೀವ ಗುಪ್ತಾಗೆ ಒಂದು ವರ್ಷ ಜೈಲು ಹಾಗೂ 10 ಸಾವಿರ ರುಪಾಯಿ ದಂಡ, ಹಾಗೂ ಅಪರಾಧಕ್ಕೆ ಸಹಕರಿಸಿದ ಬೋಲ್ ನಾಥ್ ಹಾಗೂ ಶ್ಯಾಮ್ ಸಿಂಗ್ ಅವರಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಏನಿದು ಪ್ರಕರಣ?
1999 ರ ಜನವರಿಯಲ್ಲಿ ಪಟಿಯಾಲದ ಲೋಧಿ ಬಡಾವಣೆಯಲ್ಲಿ ಬಿಎಂಡಬ್ಲೂ ಕಾರ್ ನ್ನು ವೇಗವಾಗಿ ಚಾಲನೆ ಮಾಡಿ ಮೂವರು ಪೊಲೀಸರು ಸೇರಿದಂತೆ ಆರು ಮಂದಿ ಸಾವಿಗೆ ಸಂಜೀವ ನಂದಾ ಕಾರಣರಾಗಿದ್ದರು. ಆಗ ಸಂಜೀವ ನಂದಾ ಅವರ ಮೇಲೆ ಹಿಟ್ ಅಂಡ್ ರನ್ ಪ್ರಕರಣ ದಾಖಲಿಸಲಾಗಿತ್ತು. ಪಾಟಿಯಾಲ ನ್ಯಾಯಾಲಯದ ನಂತರ ದೆಹಲಿಯ ಹೈಕೋರ್ಟ್‌ಗೆ ಪ್ರಕರಣವನ್ನು ವರ್ಗಾಯಿಸಲಾಗಿತ್ತು. ಕಳೆದ ಹತ್ತು ವರ್ಷಗಳಿಂದ ವಿಚಾರಣೆ ನಡೆಯುತ್ತಿದ್ದು, ಕೊನೆಗೂ ಇಂದು ಆರೋಪಿಯನ್ನು ಅಪರಾಧಿ ಎಂದು ಅಧಿಕೃತವಾಗಿ ಘೋಷಣೆ ಮಾಡಲಾಯಿತು.
ಸಂಜೀವ ನಂದಾ ನಿವೃತ್ತ ಸೇನಾಧಿಕಾರಿ ಎಸ್.ಎಂ.ನಂದಾ ಅವರ ಮೊಮ್ಮಗ. ಸಂಜೀವನ ಜೊತೆಗೆ ಇನ್ನೂ ಮೂವರಾದ ರಾಜೀವ ಗುಪ್ತಾ, ಬೋಲ್ ನಾಥ್, ಶ್ಯಾಂ ಸಿಂಗ್ ರಾಣಾ ಸಾಕ್ಷ್ಯಾಧಾರಗಳನ್ನು ನಾಶಪಡಿಸಿದ ಹಿನ್ನೆಲೆಯಲ್ಲಿ ಇವರನ್ನು ಅಪರಾಧಿಗಳೆಂದು ನ್ಯಾಯಾಲಯ ಪರಿಗಣಿಸಿದೆ.
(ದಟ್ಸ್ ಕನ್ನಡ ವಾರ್ತೆ)
ಅಂತ್ಯ ಕಂಡ ಬಿಎಂಡಬ್ಲ್ಯುಹಿಟ್ ಅಂಡ್ ರನ್ ಪ್ರಕರಣ












Click it and Unblock the Notifications