ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭ್ರಷ್ಟ ಖಾಕಿಗಳ ಮೇಲೆ ಎರಗಿದ ಲೋಕಾಯುಕ್ತ

By Staff
|
Google Oneindia Kannada News

DYSP krishnappaಬೆಂಗಳೂರು. ಆ. 7 : ಭ್ರಷ್ಟರ ವಿರುದ್ಧ ಸಮರ ಸಾರಿರುವ ಲೋಕಾಯುಕ್ತ ಪೊಲೀಸರು ಇಂದು ರಾಜ್ಯದ ವಿವಿಧೆಡೆ ಕಾರ್ಯಚರಣೆ ಮುಂದುವರೆಸಿ ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಬೀಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸಾರಿಗೆ, ಪೊಲೀಸ್ ಮತ್ತು ಅರಣ್ಯ ಇಲಾಖೆಯ ಐದು ಮಂದಿ ಅಧಿಕಾರಿಗಳ ಕಚೇರಿ ಮತ್ತು ನಿವಾಸದ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಸಂಪಾದಿಸಿದ್ದ ಚಿನ್ನ, ನಗದು, ಆದಾಯಕ್ಕಿಂತ ಹೆಚ್ಚಾಗಿ ಗಳಿಸಿದ್ದ ಅಪಾರ ಪ್ರಮಾಣದ ಆಸ್ತಿಪಾಸ್ತಿ ಹೊಂದಿದ ದಾಖಲೆ ಪತ್ರಗಳು ಸೇರಿ ಒಟ್ಟು ರು.10 ಕೋಟಿ ಮೌಲ್ಯದ ಅಕ್ರಮ ಸಂಪತ್ತನ್ನು ವಶಪಡಿಸಿಕೊಳ್ಳಲಾಗಿದೆ.

ಬೆಂಗಳೂರು, ಧಾರವಾಡ, ಬಿಜಾಪುರ, ಮೈಸೂರು, ಚಿಕ್ಕಮಗಳೂರು, ದಾವಣಗೆರೆ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ಇಂದು ಬಲೆಗೆ ಬಿದ್ದ ಐವರು ಅಧಿಕಾರಿಗಳಲ್ಲಿ ಮೈಸೂರು ಮೂಲದ ಧಾರವಾಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿವೈಎಸ್ ಪಿ ಕೃಷ್ಣಪ್ಪ( 2.60 ಕೋಟಿ ರು.ಗಳು), ಬಿಜಾಪುರ ಡಿವೈಎಸ್ ಪಿ ಬಿ.ಟಿ.ಚವ್ಹಾಣ್(43 ಲಕ್ಷ ರುಪಾಯಿಗಳು), ಬೆಂಗಳೂರು ಸಿಸಿಬಿ ವಿಭಾಗದ ಇನ್ಸ್ ಪೆಕ್ಟರ್ ಶೇಖರ್, ಚಿಕ್ಕಮಗಳೂರು ಅರಣ್ಯಾಧಿಕಾರಿ ಖಾಜಾ ಮೊಯಿದ್ದೀನ್ (86 ಲಕ್ಷ ರುಪಾಯಿಗಳು), ಬೆಂಗಳೂರಿನ ಅಪರಾಧಿ ವಿಭಾಗದ ಇನ್ಸ್ ಪೆಕ್ಟರ್ ನಾಗೇಶ್ (4.65 ಕೋಟಿ ರು.ಗಳು), ದಾವಣಗೆರೆ ಪ್ರಾದೇಶಿಕ ಸಾರಿಗೆ ಅಧಿಕಾರಿ ತೆಂಬದ್ (1.38 ಕೋಟಿ ರುಪಾಯಿಗಳ) ಅವರು ಅಕ್ರಮವಾಗಿ ಸಂಪಾದಿಸಿದ್ದ ಆಸ್ತಿಪಾಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ.

ಇಂದು ಬೆಳಗ್ಗೆ ಧಾರವಾಡ ಡಿವೈಎಸ್ ಪಿ ಕೃಷ್ಣಪ್ಪ ಅವರ ಕಚೇರಿ ಮೇಲೆ ದಾಳಿ ಹಾಗೂ ಮೈಸೂರಿನ ಕುವೆಂಪು ನಗರದಲ್ಲಿರುವ ಅವರ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಈ ಸಂದರ್ಭದಲ್ಲಿ ಒಂದೂವರೆ ಎಕರೆ ಜಮೀನು ಹಾಗೂ ನಗರದ ರಿಂಗ್ ರಸ್ತೆಯಲ್ಲಿರುವ ವಾಣಿಜ್ಯ ಮಳಿಗೆಗಳು, ದಾಖಲೆ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಧಾರವಾಡದಲ್ಲಿ ಲೋಕಾಯುಕ್ತ ನಿಜಗುಣಯ್ಯ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಲಾಗಿದೆ.

ಬೆಂಗಳೂರಿನ ಸಿಸಿಬಿ ಸಬ್ ಇನ್ಸ್ ಪೆಕ್ಟರ್ ನಾಗೇಶ್ ನಿವಾಸ ಮೇಲೆ ದಾಳಿ ನಡೆಸಿ ನಾಲ್ಕು ಕೋಟಿ ರುಪಾಯಿಗಳ ಆಸ್ತಿಪಾಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ. ಇವರ ಹೆಸರಿನಲ್ಲಿ ಕಲ್ಯಾಣ ಮಂಟಪ ಮತ್ತು ಸ್ವಿಮಿಂಗ್ ಪೂಲ್ ಪತ್ತೆಯಾಗಿದೆ. ದಾವಣಗೆರೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಚ್.ಜಿ.ತೆಂಬದ್ ಅವರ ನಿವಾಸದ ಮೇಲೆ ದಾಳಿ ನಡೆಸಿ 50 ಲಕ್ಷ ರು.ಗಳ ಮನೆ ಮತ್ತು ದಾವಣಗೆರೆ ತಾಲ್ಲೂಕಿನ ಬೆಳವನೂರು ಗ್ರಾಮದಲ್ಲಿ 75 ಲಕ್ಷ ರುಪಾಯಿ ಬೆಲೆ ಬಾಳುವ ಜಮೀನಿನ ದಾಖಲೆ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಚಿಕ್ಕಮಗಳೂರಿನ ಅರಣ್ಯಾಧಿಕಾರಿ ಖಾಜಾ ಮೊಯಿದ್ದೀನ್ ಅವರ ಕಚೇರಿ ಮತ್ತು ನಿವಾಸದ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.

ಸಾರಿಗೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗಿದ್ದು, ಅಕ್ರಮವಾಗಿ ಸಂಪಾದಿಸಿರುವ ಅಪಾರ ಪ್ರಮಾಣದ ಚಿರ ಮತ್ತು ಚರಾಸ್ತಿಗಳನ್ನು ವಶಪಡಿಸಿಕೊಳ್ಳುವಲ್ಲಿ ಲೋಕಾಯುಕ್ತ ಪೋಲೀಸರು ಯಶಸ್ವಿಯಾಗಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಆಗಸ್ಟ್ ಅಂತ್ಯಕ್ಕೆ ಗಣಿ ಅವ್ಯವಹಾರದ ವರದಿ ಸಲ್ಲಿಕೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X