ಬಾಲಿವುಡ್‌ಗೆ ಸಚಿನ್ ತೆಂಡೂಲ್ಕರ್ ಪಾದಾರ್ಪಣೆ
ಮುಂಬೈ, ಜು.29: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಬಾಲಿವುಡ್ ಚಿತ್ರದಲ್ಲಿ ನಟಿಸಲಿದ್ದಾರೆ. ಸಿದ್ಧಿ ವಿನಾಯಕನ ಕುರಿತಾದ ಬಾಲಿವುಡ್‌ನ ಭಕ್ತಿ ಪ್ರಧಾನ ಚಿತ್ರದಲ್ಲಿ ಇದೇ ಪ್ರಥಮ ಬಾರಿಗೆ ಅವರು ಅತಿಥಿ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ.
ಚಿತ್ರದ ಹೆಸರು 'ವಿಘ್ನಹರ ಶ್ರೀ ಸಿದ್ಧಿ ವಿನಾಯಕ' ಎಂದು. ಈ ಚಿತ್ರದಲ್ಲಿ ಸಚಿನ್‌ದು ಸಣ್ಣ ಪಾತ್ರವಂತೆ. ಚಿತ್ರದ ಹಾಡು ಅಥವಾ ಯಾವುದಾದರೂ ಒಂದು ದೃಶ್ಯದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಈ ಕುರಿತು ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎನ್ನುತ್ತಾರೆ ಚಿತ್ರದ ನಿರ್ಮಾಪಕ ರಾಜೀವ್ ಸಂಘ್ವಿ. ಪ್ರಸ್ತುತ ಶ್ರೀಲಂಕಾ ಪ್ರವಾಸದಲ್ಲಿರುವ ಸಚಿನ್ ಹಿಂತಿರುಗಿದ ನಂತರವಷ್ಟೇ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ ಎಂದು ತೆಂಡೂಲ್ಕರ್ ಕಚೇರಿ ಮೂಲಗಳು ತಿಳಿಸಿದೆ. ಈ ಚಿತ್ರದ ಮತ್ತೊಂದು ವಿಶೇಷತೆ ಏನೆಂದರೆ ತೆಂಡೂಲ್ಕರ್ ಈ ಚಿತ್ರಕ್ಕಾಗಿ ನಯಾಪೈಸೆಯನ್ನೂ ಸಂಭಾವನೆಯಾಗಿ ಪಡೆದಿಲ್ಲ. ಕಾರಣ ಅವರು ಸಿದ್ಧಿವಿನಾಯಕನ ಪರಮ ಭಕ್ತರಂತೆ. ಹಾಗಾಗಿ ತನಗೆ ಸಂಭಾವನೆ ಒಲ್ಲೆ ಎಂದಿದ್ದಾರೆ ಎನ್ನುತ್ತಾರೆ ನಿರ್ಮಾಪಕರು.
ಮುಂಬೈನ ಸಿದ್ಧಿ ವಿನಾಯಕ ಮಂದಿರ ಜಗದ್ವಿಖ್ಯಾತ. ಈ ದೇವಸ್ಥಾನದ ಟ್ರಸ್ಟ್ ಸಹ ಚಿತ್ರ ನಿರ್ಮಾಣದಲ್ಲಿ ತೊಡಗಿಕೊಂಡಿದೆ. ಸಚಿನ್ ಖಾಯಂ ಆಗಿ ಸಿದ್ಧಿ ವಿನಾಯಕ ಮಂದಿರಕ್ಕೆ ಭೇಟಿ ಕೊಡುತ್ತಿರುತ್ತಾರೆ ಎನ್ನುತ್ತಾರೆ ಟ್ರಸ್ಟ್‌ನ ಅಧ್ಯಕ್ಷರಾದ ಸುಭಾಶ್ ಮಾಯೇಕರ್. 'ವಿಘ್ನಹರ ಶ್ರೀ ಸಿದ್ಧಿವಿನಾಯಕ' ಚಿತ್ರ ಆಗಸ್ಟ್‌ನಲ್ಲಿ ಸೆಟ್ಟೇರಲಿದೆ. ಬಾಲಿವುಡ್‌ನ ಬಿಗ್ ಬಿ ಅಮಿತಾಬ್ ಬಚ್ಚನ್ ಈ ಚಿತ್ರಕ್ಕೆ ಕಂಠದಾನ ಮಾಡಲಿದ್ದಾರೆ.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications