ಸೋನಿಯಾರನ್ನು ಭೇಟಿ ಮಾಡಿದ ಮಣ್ಣಿನ ಮಗ
ನವದೆಹಲಿ, ಜು. 22 : ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನಡೆ ಕೊನೆಯ ಕ್ಷಣದವರೆಗೂ ಸ್ಪಷ್ಟವಾಗಿ ಗೊತ್ತಾಗಿಲ್ಲ. ಅಧಿಕಾರದ ಮೋಹ ಮತ್ತು ಚಾಣಕ್ಯ ರಾಜಕಾರಣಕ್ಕೆ ಅನ್ವರ್ಥ ಎನ್ನುವಂತಿರುವ ಅವರ ನಡೆ ಇದೀಗ ಮತ್ತೆ ಬದಲಾಗಿದೆ. ವಿಶ್ವಾಸಮತ ಸಾಬೀತು ಪಡಿಸಲು ಕೆಲವೇ ಗಂಟೆಗಳು ಬಾಕಿ ಇರುವ ಈ ಮಹತ್ವದ ಗಳಿಗೆಯಲ್ಲಿ ದೇವೇಗೌಡರು ಯಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ ಎನ್ನುವ ಸುದ್ದಿ ದಟ್ಟವಾಗಿ ಹಬ್ಬಿದೆ.
ಕಳೆದ ಎರಡು ದಿನಗಳಿಂದ ರಾಜಧಾನಿಯಲ್ಲಿ ಬೀಡುಬಿಟ್ಟಿರುವ ದೇವೇಗೌಡರು ಯುಪಿಎಗೆ ಕೈಕೊಟ್ಟು ಬಿಎಸ್ಪಿಯ ಮಾಯಾವತಿ ಅವರ ಪರ ನಿಂತಿದ್ದರು. ತೃತೀಯ ರಂಗವನ್ನು ಗಟ್ಟಿಗೊಳಿಸಬೇಕು. ಆ ಮೂಲಕ ಮತ್ತೆ ರಾಷ್ಟ್ರ ರಾಜಕಾರಣದಲ್ಲಿ ಮಿಂಚಬೇಕು ಎನ್ನುವ ಅವರ ಮಹದಾಸೆ ಈಡೇರದಿದ್ದರಿಂದ ಮತ್ತೆ ಅವರು ಸೋನಿಯಾ ಗಾಂಧಿ ಅವರ ಬೆನ್ನು ಬಿದ್ದಿದ್ದಾರೆ. ಒಂದು ಮೂಲಗಳ ಪ್ರಕಾರ ಯುಪಿಎಗೆ ವಿಶ್ವಾಸಮತದಲ್ಲಿ ಗೆಲುವು ಸಾಧಿಸುವ ಮತಗಳು ಲಭಿಸಲಿವೆ ಎನ್ನುವುದನ್ನು ಅರಿತಿರುವ ದೇವೇಗೌಡರು ಹಳೆ ಗಂಡನ ಪಾದವೇ ಗತಿ ಎಂದು ಸೋನಿಯಾ ಮೊರೆಹೋಗಿದ್ದಾರೆ ಎನ್ನಲಾಗಿದೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಯುಪಿಎ ಸರ್ಕಾರದಲ್ಲಿ ಸಂಪುಟ ಖಾತೆ ಹಾಗೂ ಮುಂಬರುವ ದಿನಗಳಲ್ಲಿ ಕರ್ನಾಟಕ ಉಪಚುನಾವಣೆಯಲ್ಲಿ ಜೆಡಿಎಸ್ ಜತೆಗೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎನ್ನುವ ಅವರ ಮಹತ್ತರ ಆಸೆ ಚಿಗುರಿರಬಹುದು. ಒಟ್ಟಿನಲ್ಲಿ ಇಂದು ದೇವೇಗೌಡರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲು ಮುಂದಾಗಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ. ಕಾಂಗ್ರೆಸ್ ಗೆ ಪ್ರತಿಷ್ಠೆಯ ಪ್ರಶ್ನೆ ಎಂದರೆ ವಿಶ್ವಾಸಮತ ಗೆಲುವು ಸಾಧಿಸುವುದು. ಈ ಏಕೈಕ ಗುರಿಗಾಗಿ ಕಾಂಗ್ರೆಸ್ ಯಾವ ತ್ಯಾಗಕ್ಕೂ ಸಿದ್ಧ. ಹಾಗೆಯೇ ಒಂದೊಂದು ಮತವು ಸಂಖ್ಯಾಶಾಸ್ತ್ರಕ್ಕೆ ಅಮೂಲ್ಯವಾಗಿದೆ. ಸಿಕ್ಕ ಸಮಯವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಗೌಡರು ಎತ್ತಿಕೈ ಎನ್ನುವುದು ಅನೇಕ ಸಲ ಸಾಬೀತುಪಡಿಸಿದ್ದಾರೆ.
ಕೇವಲ ಔಪಚಾರಿಕ ಭೇಟಿ ಎಂದ ಗೌಡರು
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿರುವುದು ಕೇವಲ ಔಪಚಾರಿಕ ಮಾತ್ರ. ನನ್ನ ಬೆಂಬಲವೇನಿದ್ದರೂ ತೃತೀಯ ರಂಗಕ್ಕೆ ನೀಡುತ್ತೇನೆ. ಯುಪಿಎ ವಿರೋಧವಾಗಿ ಮಚ ಚಲಾಯಿಸಲಾಗುವುದು ಎಂದು ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications