ಆಗಸ್ಟ್1ರಿಂದ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್?
ಬೆಂಗಳೂರು, ಜೂ.26: ರೈತರ ಕೃಷಿ ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವುದಾಗಿ ಕೊಟ್ಟ ಭರವಸೆಯನ್ನು ಈಡೇರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆಗಸ್ಟ್ 1 ರಿಂದ ಕೃಷಿ ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ಈ ಯೋಜನೆ ಜಾರಿಯಾದರೆ ರಾಜ್ಯದ ಸುಮಾರು 17 ಲಕ್ಷ ಕೃಷಿ ಪಂಪ್‌ಸೆಟ್‌ಗಳು ಉಚಿತ ವಿದ್ಯುತ್‌ನ ಫಲಾನುಭವಪಡೆಯಲಿವೆ. ಇದಕ್ಕಾಗಿ ರಾಜ್ಯ ಸರ್ಕಾರ 840 ಕೋಟಿ ರು.ಗಳಷ್ಟು ಹೆಚ್ಚಿನ ಹೊರಯನ್ನು ಭರಿಸಬೇಕಾಗುತ್ತದೆ. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜುಲೈ 17ರಂದು ಮಂಡಿಸಲಿರುವ ಬಜೆಟ್‌ನಲ್ಲಿ ಇದಕ್ಕಾಗಿ ಹಣ ಮೀಸಲಿಡಲು ನಿರ್ಧರಿಸಿದ್ದಾರೆ.
ಆದರೆ ಏಕಕಾಲಕ್ಕೆ ಇಷ್ಟೊಂದು ಹಣ ಕೊಡಲು ಸಾಧ್ಯವಾಗದ ಕಾರಣ ಮೂರು ಕಂತುಗಳಲ್ಲಿ ಒದಗಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಉಚಿತ ವಿದ್ಯುತ್ ಪಡೆಯಲಿರುವ ಕೃಷಿ ಪಂಪ್ ಸೆಟ್‌ಗಳಿಗೆ ಮೀಟರ್‌ಗಳನ್ನು ಅಳವಡಿಸುವ ಯೋಚನೆಯೂ ಸರ್ಕಾರಕ್ಕಿದೆ. ರೈತ ಮುಖಂಡರೊಡನೆ ಚರ್ಚಿಸಿ ರೈತರ ಮನ ಒಲಿಸಲು ಸರ್ಕಾರ ಮುಂದಾಗಿದೆ. ಆದರೆ ವಿದ್ಯುತ್ ಮೀಟರ್ ಅಳವಡಿಸುವ ಬಗ್ಗೆ ರೈತ ಮುಖಂಡರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಈ ಕುರಿತು ರೈತ ಮುಖಂಡ ಕೆ.ಎಸ್.ಪುಟ್ಟಣ್ಣಯ್ಯ ಸೇರಿದಂತೆ ಹಲವು ನಾಯಕರೊಂದಿಗೆ ಮಾತುಕತೆ ನಡೆದಿದೆ. ಒಟ್ಟಿನಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಲು ಯಡಿಯೂರಪ್ಪ ಸರ್ಕಾರ ಶತಃ ಸಿದ್ಧವಾಗಿದೆ.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications