ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಳ್ಳಭಟ್ಟಿ ದುರಂತ: ರಾಜಕೀಯ ಕೆಸರೆರೆಚಾಟ

By Staff
|
Google Oneindia Kannada News

ಬೆಂಗಳೂರು, ಮೇ 19: ಚುನಾವಣೆ ಆಯೋಗದ ಕಟ್ಟುನಿಟ್ಟಿನ ನೀತಿ ಸಂಹಿತೆಗಳ ನಡುವೆಯೇ ನಕಲಿ ಮದ್ಯ ಹಾಗೂ ಕಳ್ಳಭಟ್ಟಿ ಸಾರಾಯಿ ಕೋಲಾರ, ಬೆಂಗಳೂರು ಸೇರಿದಂತೆ ತಮಿಳುನಾಡಿನ ಹೊಸೂರಿನಲ್ಲಿ ಭಾನುವಾರ 47ಕ್ಕೂ ಅಧಿಕ ಮಂದಿಯನ್ನು ಬಲಿತೆಗೆದುಕೊಂಡು 33 ಮಂದಿಯನ್ನು ತೀವ್ರವಾಗಿ ಅಸ್ವಸ್ಥಗೊಳಿಸಿದೆ. ಸಾವಿನ ಸಂಖ್ಯೆ ಮತ್ತಷ್ಟು ಏರುವ ಸಂಭವವಿದೆ.

ಬೆಂಗಳೂರು ನಗರದ ದೇವರಜೀವನಹಳ್ಳಿಯಲ್ಲಿ ಒಬ್ಬ ಮಹಿಳೆ ಸೇರಿದಂತೆ ಒಟ್ಟು 8 ಮಂದಿ, ಇದೀಗ ಬಂದ ಮಾಹಿತಿಯಂತೆ ಕೋಲಾರ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 18ಕ್ಕೆ ಏರಿದೆ, ಮಾಲೂರಿನ ಟೇಕಲ್‌ನಲ್ಲಿ ಒಬ್ಬ ಮಹಿಳೆ ಸೇರಿದಂತೆ 6 ಮಂದಿ, ಬೆಳ್ಳೂರಿನಲ್ಲಿ ಒಬ್ಬರು ಕಳ್ಳಭಟ್ಟಿ ಸಾರಾಯಿಯನ್ನು ಕುಡಿದು ದುರಂತ ಸಾವನ್ನಪ್ಪಿದ್ದಾರೆ. ಹಾಗೆಯೇ ತಮಿಳುನಾಡಿನ ಹೊಸೂರು ಸಮೀಪದ ದಿನಮಂಗಲಂ ಗ್ರಾಮದಲ್ಲಿ 6 ಮಹಿಳೆಯರು ಸಹಿತ ಒಟ್ಟು ಎಂಟು ಮಂದಿ ಮೃತಪಟ್ಟಿದ್ದಾರೆ.

ಕಳ್ಳಭಟ್ಟಿ ಸಾರಾಯಿ ಕುಡಿದು ಮೃತಪಟ್ಟ ಹಾಗೂ ಅಸ್ವಸ್ಥಗೊಂಡವರೆಲ್ಲಾ ದಿನಗೂಲಿ ಕಾರ್ಮಿಕರು. ಅಸ್ಥಗೊಂಡವರನ್ನು ಅಂಬೇಡ್ಕರ್ ವೈದ್ಯಕೀಯ ಆಸ್ಪತ್ರೆ ಮತ್ತು ಬೌರಿಂಗ್ ಆಸ್ಪತ್ರೆಗೆ ಸೇರಿಸಲಾಗಿದೆ. ಹಲವರ ಸ್ಥಿತಿ ಚಿಂತಾಜನಕವಾಗಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ. ಕಳ್ಳಭಟ್ಟಿ ಸಾರಾಯಿಯಲ್ಲಿ ಮೆಥನಾಲ್ ವಿಷ ಪದಾರ್ಥ ಮಿಶ್ರವಾಗಿರುವ ಸಾಧ್ಯತೆಗಳಿವೆ.

ಭಾನುವಾರ ರಾತ್ರಿ ರಾಜಕಾರಣಿಗಳು ವಿತರಿಸಿದ ಮದ್ಯವನ್ನು ದೊಡ್ಡ ಪ್ರಮಾಣದಲ್ಲಿ ಮನೆಯಲ್ಲಿ ಸಂಗ್ರಹಿಸಿಕೊಂಡಿದ್ದರು. ಕಳ್ಳಭಟ್ಟಿ ಮಾರಾಟ ಮಾಡಿದವರ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆರೋಪಿಗಳ ಪತ್ತೆಗೆ ತನಿಖೆ ಚುರುಕಾಗಿದೆ ಎಂದು ಪೂರ್ವ ವಲಯದ ಡಿಸಿಪಿ ಬಿ.ಕೆ.ಸಿಂಗ್ ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮತ್ತೆ ಸಾರಾಯಿ ಮಾರಾಟ ಪ್ರಾರಂಭಿಸುವುದಾಗಿ ಜನಾರ್ದನ ಪೂಜಾರಿ ಘಂಟಾಘೋಷವಾಗಿ ಪ್ರಕಟಿಸಿದ್ದರು. ಈ ಬಗ್ಗೆ ಕಾಂಗ್ರೆಸ್‌ನಲ್ಲೇ ತೀವ್ರ ಭಿನ್ನಾಭಿಪ್ರಾಯಗಳು ಏರ್ಪಟ್ಟಿದ್ದವು. ರಾಜ್ಯದಲ್ಲಿ ಕೊನೆಯ ಹಂತದ ಮತದಾನ ಮಾತ್ರ ಬಾಕಿ ಇದೆ. ಅಮಾಯಕ ಜನ ಕಳ್ಳಭಟ್ಟಿಗೆ ಬಲಿಯಾಗಿರುವುದು ರಾಜಕೀಯ ಪಕ್ಷಗಳ ಮತ್ತಷ್ಟು ಕೆಸರೆರಚಾಟಕ್ಕೆ ಕಾರಾಣವಾಗುವುದರಲ್ಲಿ ಅನುಮಾನವಿಲ್ಲ. ಒಟ್ಟಿನಲ್ಲಿ ಸಾರಾಯಿ ಮೇಲೆ ನಿಷೇಧ ಏರಿದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಗೆ ಕಾಂಗ್ರೆಸ್‌ನ್ನು ಹಿಗ್ಗಾಮುಗ್ಗಾ ಟೀಕಿಸಲು ಒಂದು ಬಲವಾದ ಅಸ್ತ್ರ ಸಿಕ್ಕಂತಾಗಿದೆ.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X