ಸಿಎಂ ಪದವಿಗೆ ನಾನು ಸ್ಪರ್ಧಿಯಲ್ಲವೇ ಅಲ್ಲ : ಕೃಷ್ಣ

Krishna rules himself out of CM race in Karnatakaಬೆಂಗಳೂರು, ಮೇ 9 : ಕಾಂಗ್ರೆಸ್‌ನ ಚುನಾವಣಾ ಸಮನ್ವಯ ಸಮಿತಿ ಮತ್ತು ಪ್ರಚಾರ ಸಮಿತಿ ಹೊಣೆ ಹೊತ್ತು ಯಾವುದೇ ಕ್ಷೇತ್ರದಿಂದಲೂ ಸ್ಪರ್ಧಿಸದಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಹುದ್ದೆಗಿರುವ ಸ್ಪರ್ಧೆಯಲ್ಲಿ ತಾವಿಲ್ಲವೇ ಇಲ್ಲ ಎಂದು ಘೋಷಿಸಿದ್ದಾರೆ.

ಹೈಕಮಾಂಡ್‌ನ ಆದೇಶದಂತೆ ಮಹಾರಾಷ್ಟ್ರ ರಾಜ್ಯಪಾಲ ಹುದ್ದೆಗೆ ರಾಜಿನಾಮೆ ನೀಡಿ ಕರ್ನಾಟಕಕ್ಕೆ ಮರಳಿ ಬಂದ ಮೇಲೆ ಚುನಾವಣಾ ಪ್ರಚಾರದ ನೇತೃತ್ವವನ್ನು ವಹಿಸಿದ್ದಾರೆ. ಮದ್ದೂರಿನಿಂದ ಸ್ಪರ್ಧಿಸಬಹುದೆಂಬ ಊಹಾಪೋಹಗಳಿದ್ದರೂ ಚುನಾವಣಾ ಕಣದಲ್ಲಿ ಕೃಷ್ಣ ಉಳಿಯದೇ ಇದ್ದಿದ್ದು ಅವರ ಬೆಂಬಲಿಗರಿಗೆ ಭಾರೀ ನಿರಾಶೆ ಉಂಟು ಮಾಡಿತ್ತು. ಹಾಗೆಯೇ ಮುಖ್ಯಮಂತ್ರಿ ಗಾದಿಯ ಮೇಲೆ ಕಣ್ಣಿಟ್ಟಿದ್ದ ಕೆಲವರು ನಿರಾಳರಾಗುವಂತೆಯೂ ಮಾಡಿತ್ತು.

ಕಾಂಗ್ರೆಸ್ ಪಕ್ಷದಲ್ಲಿಯೇ ಮುಖ್ಯಮಂತ್ರಿ ಪದವಿಯ ಮೇಲೆ ಅರ್ಧ ಡಜನ್ ನಾಯಕರು ಕಣ್ಣಿಟ್ಟಿದ್ದಾರೆ. ಕಾಂಗ್ರೆಸ್ ಬಹುಮತ ಗಳಿಸಿದರೆ ಹಿಂದುಳಿದ ವರ್ಗದ ನಾಯಕನಾಗಿ ಮಲ್ಲಿಕಾರ್ಜುನ ಖರ್ಗೆ ಮೊದಲ ಬಾರಿ ಕುರ್ಚಿಯೇರುವ ಸಾಧ್ಯತೆಯಿದೆ ಎಂಬ ಮಾತುಗಳಿವೆ. ಚುನಾವಣೆ ಮುಗಿಯುವರೆಗೂ ಯಾವುದೇ ನಾಯಕನನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸುವ ಮತ್ತು ಯಾವುದೇ ಕಾರ್ಯಕರ್ತನಿಗೂ ಈ ಬಗ್ಗೆ ಬಾಯಿಬಿಡಲು ಅವಕಾಶ ನೀಡದ ಪರಿಪಾಠವನ್ನು ಕಾಂಗ್ರೆಸ್ ಹೈಕಮಾಂಡ್ ನಡೆಸಿಕೊಂಡು ಬಂದಿದೆ. ಅಂತಿಮ ಹಂತದವರೆಗೂ ಸಸ್ಪೆನ್ಸ್ ಕಾಯ್ದುಕೊಂಡು ಬರುವ ಕಾಂಗ್ರೆಸ್ ಹೈಕಮಾಂಡ್ ನುಡಿದಂತೆಯೇ ನಾಯಕರು ತಲೆಯಲ್ಲಾಡಿಸಬೇಕು. ಅಂತಹುದರಲ್ಲಿಯೂ ಖರ್ಗೆಯೇ ಮುಂದಿನ ಮುಖ್ಯಮಂತ್ರಿ ಎಂಬ ಹೇಳಿಕೆಯನ್ನು ಸಂಸದೆ ತೇಜಸ್ವಿನಿ ಗೌಡ ಕೆಲ ದಿನಗಳ ಹಿಂದೆ ನೀಡಿದ್ದರು.

ಕೃಷ್ಣ ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂದೇಟು ಹಾಕಿದ್ದರೂ ಚುನಾವಣೆ ಪ್ರಚಾರದ ಸಂಪೂರ್ಣ ಜವಾಬ್ದಾರಿಯನ್ನು ಅವರೇ ಹೊತ್ತಿದ್ದರಿಂದ ಅವರೇ ಮುಖ್ಯಮಂತ್ರಿಯಾಗಬಹುದೆಂದು ಗಾಳಿಮಾತುಗಳು ರಾಜಕೀಯ ವಲಯದಲ್ಲಿ ಹಬ್ಬಿದ್ದವು. ಈಗ ಎಲ್ಲ ಊಹಾಪೋಹಗಳಿಗೆ ಸ್ವತಃ ಕೃಷ್ಣರೇ ಮಂಗಳ ಹಾಡಿದ್ದಾರೆ. ಚುನಾವಣೆಯ ನೊಗ ಹೊತ್ತು ಪಕ್ಷಕ್ಕೆ ಬಹುಮತ ಗಳಿಸಿಕೊಡುವುದೇ ತಮ್ಮ ಅಂತಿಮ ಗುರಿ ಎಂದು 77ರ ಹರೆಯದ ಕೃಷ್ಣ ಸಾರಿದ್ದಾರೆ.

ಬುಧವಾರ ತುಮಕೂರಿನಲ್ಲಿ ಸೋನಿಯಾ ಗಾಂಧಿ ಮತದಾರರನ್ನುದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ ಕೃಷ್ಣ ಎರಡನೇ ಸಾಲಿನಲ್ಲಿ ಕುಳಿತಿದ್ದುದು ಅನೇಕರ ಹುಬ್ಬೇರುವಂತೆ ಮಾಡಿತ್ತು. ಆದರೆ, ಕೃಷ್ಣರ ಉಪಸ್ಥಿತಿಯೇ ಅಧಿಕಾರ ಮತ್ತೆ ಮರಳಿ ಗಳಿಸಲು ಕಾಂಗ್ರೆಸ್‌ಗಿರುವ ಏಕೈಕ ಸಾಧನವೆಂಬುದನ್ನೂ ಹೈಕಮಾಂಡ್ ಅರಿತಿದೆ.

ಖರ್ಗೆ ಸೇರಿದಂತೆ ಒಮ್ಮೆ ಕುರ್ಚಿಯ ರುಚಿ ಕಂಡಿರುವ ಧರಂಸಿಂಗ್, ಎಚ್.ಕೆ.ಪಾಟೀಲ್, ಡಿಕೆ ಶಿವಕುಮಾರ್, ಮೊಮ್ಮಗನಿಗೆ ಟಿಕೆಟ್ ಸಿಗದೇ ಕಾಂಗ್ರೆಸ್ಸನ್ನೇ ತೊರೆಯಲು ಹೊರಟಿದ್ದ ಸಿ.ಕೆ.ಜಾಫರ್ ಷರೀಫ್, ಮೊದಲ ಬಾರಿ ಅಸೆಂಬ್ಲಿ ಚುನಾವಣೆಗೆ ಸ್ಪರ್ಧಿಸುತ್ತಿರುವ ಅಂಬರೀಷ್, ಕೆಪಿಸಿಸಿ ಮಾಜಿ ಅಧ್ಯಕ್ಷ ಜನಾರ್ಧನ ಪೂಜಾರಿ ಕೂಡ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ. ಕೆಲವರು ಬಾಯಿಬಿಟ್ಟೂ ಹೇಳಿದ್ದಾರೆ.

(ಎಎನ್ಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+