ತುಮಕೂರು ಸಿದ್ದಗಂಗಾ ಕಿರಿಯ ಸ್ವಾಮೀಜಿ ಜೈಲುವಾಸ ಅಂತ್ಯ
ಬೆಂಗಳೂರು, ಮಾ.6: ತುಮಕೂರು ಸಿದ್ಧ ಗಂಗಾ ಮಠದ ಕಿರಿಯ ಸ್ವಾಮೀಜಿ ಗೌರಿಶಂಕರ ಅವರನ್ನು ಗುರುವಾರ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಮಾಡಲಾಗಿದೆ. ಗೌರಿಶಂಕರ ಅವರನ್ನು ಬಿಡುಗಡೆಗೊಳಿಸಲು ಸುಪ್ರೀಂ ಕೋರ್ಟ್‌ನ ಅಧಿಕೃತ ಆದೇಶ ಪ್ರತಿ ಜೈಲು ಅಧಿಕಾರಿಗಳಿಗೆ ಇಂದು ತಲುಪಿತು.
ಸಲಿಂಗರತಿ ಆರೋಪ ಎದುರಿಸುತ್ತಿದ್ದ ಸಿದ್ಧಗಂಗಾ ಮಠದ ಕಿರಿಯ ಸ್ವಾಮೀಜಿ ಗೌರಿಶಂಕರ ಅವರನ್ನು ಸುಪ್ರೀಂ ಕೋರ್ಟ್ ಮಹಾಶಿವರಾತ್ರಿಯಂದು ಬುಧವಾರ ಖುಲಾಸೆಗೊಳಿಸಿತ್ತು. ಕೂಡಲೆ ಜೈಲಿನಿಂದ ಬಿಡುಗಡೆ ಮಾಡುವಂತೆ ಮಾರ್ಚ್ 5ರಂದು ಆದೇಶಿಸಿತ್ತು. ಕಳೆದ ಹತ್ತು ವರ್ಷಗಳಿಂದ ಸರಕಾರದ ಜತೆ ನಡೆಸುತ್ತಿದ್ದ ಕಾನೂನು ಸಮರದಲ್ಲಿ ಶ್ರೀಗಳಿಗೆ ಜಯ ಲಭಿಸಿದಂತಾಗಿದೆ.
ಜೈಲಿನಿಂದ ಹೊರಗೆ ಬಂದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಿರಿಯ ಸ್ವಾಮೀಜಿಗಳು, ನನಗೆ ಯಾವ ಲೌಕಿಕ ವ್ಯಾಮೋಹವೂ ಇಲ್ಲ. ತಮ್ಮನ್ನು ನಂಬಿದ ಭಕ್ತ ಗಣದ ಸೇವೆ ಮಾಡಲು ಸದಾ ಸಿದ್ಧ ಎಂದರು.
ತುಮಕೂರಿನಲ್ಲಿ ಕಿರಿಯ ಶ್ರೀಗಳನ್ನು ಸ್ವಾಗತಿಸಲು ಭರ್ಜರಿ ತಯಾರಿಗಳು ನಡೆಯುತ್ತಿವೆ. ಆರೋಪದಿಂದ ಶ್ರೀಗಳು ಮುಕ್ತರಾಗಿರುವುದರಿಂದ ಸಿದ್ದಗಂಗಾ ಮಠದ ಉತ್ತರಾಧಿಕಾರಿಯನ್ನಾಗಿ ಗೌರಿಶಂಕರ್ ಅವರನ್ನೇ ನೇಮಿಸಬೇಕೆಂದು ಅವರ ಅನುಯಾಯಿಗಳು ಒತ್ತಾಯಿಸುತ್ತಿದ್ದಾರೆ. ಆದರೆ, ಅವರ ಬಿಡುಗಡೆಯ ಬಗ್ಗೆ ಹಿರಿಯ ಶ್ರೀಗಳು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಸಿದ್ದಗಂಗಾ ಮಠದಿಂದ ಕಿರಿಯ ಶ್ರೀಗಳನ್ನು ಹೊರಹಾಕಿದ್ದನ್ನು ವಿರೋಧಿಸಿ ಹೂಡಿದ್ದ ಸಿವಿಲ್ ದಾವೆ ಇನ್ನೂ ಜಾರಿಯಲ್ಲಿದೆ. ಸದ್ಯಕ್ಕೆ ಅವರು ಗೊಲ್ಲಹಳ್ಳಿ ಆಶ್ರಮದಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ.
ಮಠದ ಭಕ್ತರನ್ನು ದಿಗ್ಭ್ರಮೆಗೊಳಿಸಿದ್ದ ಈ ಸಲಿಂಗಕಾಮ ಪ್ರಕರಣ 1988ರಲ್ಲಿ ದಾಖಲಾಗಿತ್ತು. 13 ವರ್ಷದ ವಿದ್ಯಾರ್ಥಿಯೊಬ್ಬ ಸ್ವಾಮಿಗಳು ತನ್ನನ್ನು ಸಲಿಂಗಕಾಮಕ್ಕೆ ಬಳಸಿಕೊಂಡಿರುವ ಬಗ್ಗೆ ದೂರು ನೀಡಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2004ರಲ್ಲಿ ರಾಜ್ಯ ಹೈಕೋರ್ಟ್ ಕೆಳ ನ್ಯಾಯಾಲಯದತೀರ್ಪುನ್ನು ಪೂರ್ತಿ ಉಲ್ಟಾ ಮಾಡಿ ಗೌರಿಶಂಕರ ಸ್ವಾಮೀಜಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ 25 ಲಕ್ಷ ರೂ.ಗಳ ದಂಡ ವಿಧಿಸಿತ್ತು. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎಸ್.ಬಿ.ಸಿನ್ಹಾ ಹಾಗೂ ಬೇಡಿ ಅವರಿದ್ದ ವಿಭಾಗೀಯ ಪೀಠಹೈಕೋರ್ಟ್‌ನ ಆದೇಶವನ್ನು ತಿರುವು ಮುರುವು ಮಾಡಿ ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದೆ.
ಘಟನೆಯ ಹಿನ್ನಲೆ ಹೀಗಿದೆ:
*ಆಗಸ್ಟ್ 29, 1986: ದೀಪಕ್ ಸಿಂಗ್ ಎಂಬ ವಿದ್ಯಾರ್ಥಿ ಗೌರಿಶಂಕರ ಸ್ವಾಮಿಜಿಗಳು ತನ್ನನ್ನು ಸಲಿಂಗಕಾಮಕ್ಕೆ ಬಳಸಿಕೊಂಡಿದ್ದಾರೆಂದು ಕ್ಯಾತ್ಸಂದ್ರ ಠಾಣೆಯಲ್ಲಿ ದೂರು ದಾಖಲಿಸಿದ್ದ.
*ಮಾರ್ಚ್ 31, 1988: ಸಿದ್ಧಗಂಗಾ ಮಠದಿಂದ ಗೌರಿಶಂಕರ ಸ್ವಾಮೀಜಿಯನ್ನು ಉಚ್ಛಾಟಿಸಲಾಯಿತು.
*ಮೆ 17, 1988: ತಮ್ಮನ್ನು ಮಠದಿಂದ ಹೊರಕ್ಕೆ ಹಾಕಿದ್ದನ್ನು ಪ್ರಶ್ನಿಸಿ ಮತ್ತು ಕಿರಿಯ ಶ್ರೀಗಳ ನೇಮಕ ಪ್ರಶ್ನಿಸಿ ಗೌರಿಶಂಕರ ಸ್ವಾಮೀಜಿಯಿಂದ ತುಮಕೂರಿನ ಸಿವಿಲ್ ನ್ಯಾಯಲಯದಲ್ಲಿ ದಾವೆ ಹೂಡಲಾಗಿತ್ತು.
*ಮೇ 27, 1988: ತುಮಕೂರು ನ್ಯಾಯಾಲಕ್ಕೆ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದರು.
*ನವೆಂಬರ್ 24, 1988: ತುಮಕೂರು ಹೆಚ್ಚುವರಿ ಹಿರಿಯ ಶ್ರೇಣಿ ನ್ಯಾಯಾಲಯದಿಂದ ಸ್ವಾಮೀಜಿ ಅವರನ್ನು ಆರೋಪ ಮುಕ್ತಗೊಳಿಸಲು ತೀರ್ಪು.
*1999: ಕರ್ನಾಟಕ ಸರ್ಕಾರ ಮತ್ತು ದೀಪಕ್ ಸಿಂಗ್‌ನಿಂದ ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ.
*ಫೆಬ್ರವರಿ 3, 2004: ನ್ಯಾಯಮೂರ್ತಿಗಳಾದ ಎಂ.ಎಫ್.ಸಲ್ಡಾನಾ ಮತ್ತು ರಾಮಣ್ಣ ಅವರಿದ್ದ ಪೀಠ ಸ್ವಾಮೀಜಿಗೆ 10 ವರ್ಷ ಸಜೆ ಮತ್ತು 25 ಲಕ್ಷ ರೂ. ದಂಡ ವಿಧಿಸಿತ್ತು.
* 2004: ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಗೌರಿಶಂಕರ ಸ್ವಾಮೀಜಿ ಮೇಲ್ಮನವಿ ಸಲ್ಲಿಸಿದ್ದರು.
* ನವೆಂಬರ್ 27, 28, 2007: ಅಂತಿಮವಾಗಿ ಗೌರಿಶಂಕರ ಸ್ವಾಮೀಜಿ ಪರ ವಕೀಲರಿಂದ ಸುಪ್ರೀಂ ಕೋರ್ಟ್‌ನಲ್ಲಿ ವಾದ.
*ಮಾರ್ಚ್ 5, 2008: ಸುಪ್ರೀಂ ಕೋರ್ಟ್ ಗೌರಿಶಂಕರ ಸ್ವಾಮೀಜಿಗಳನ್ನು ಆರೋಪದಿಂದ ಖುಲಾಸೆಗೊಳಿಸಿತು.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications