ಹೆದ್ದಾರಿ ಅಪಘಾತ :ತುರ್ತು ಚಿಕಿತ್ಸೆಗೆ ಚಿಂತನೆ
ನವದೆಹಲಿ, ಮಾ. 6 : ಬರುವ ಮೂರ್ನಾಲ್ಕು ವರ್ಷಗಳ ಅವಧಿಯಲ್ಲಿ ದೇಶದ ಎಲ್ಲ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಆಂಬುಲೆನ್ಸ್ ಸೌಕರ್ಯ ಕಲ್ಪಿಸಲಾಗುವುದು. ಪ್ರತಿ 50 ಕಿ.ಮಿ. ವ್ಯಾಪ್ತಿಯಲ್ಲಿ ಒದಗಿಬರುವ ಈ ಸೇವೆಯ ಅಗತ್ಯ ಇಂದು ಹೆದ್ದಾರಿ ಸಂಚಾರಿಗಳಿಗೆ ತುರ್ತಾಗಿ ಬೇಕಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಅಂಬುಮಣಿ ರಾಮ್ ದಾಸ್ ಗುರುವಾರ ಲೋಕಸಭೆಯಲ್ಲಿ ಹೇಳಿದರು.
ದಿನೇ ದಿನೇ ಹೆಚ್ಚಾಗುತ್ತಿರುವ ಅಪಘಾತ ಪ್ರಕರಣಗಳು, ಅಪಘಾತದಿಂದಾಗಿ ಉಂಟಾಗುತ್ತಿರುವ ಸಾವು ನೋವುಗಳ ಪ್ರಮಾಣವನ್ನು ಗಮನಿಸಿ ಈ ವ್ಯವಸ್ಥೆಯನ್ನು ಜಾರಿಗೆ ತರಲು ಸರಕಾರ ಚಿಂತಿಸಿದೆ. ಆಂಬುಲೆನ್ಸ್ ಅಲ್ಲದೆ, ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಯಲ್ಲಿ ಟ್ರಾಮಾ ಸೆಂಟರ್ ಗಳನ್ನು ತೆರೆಯಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಸಚಿವರು ತಿಳಿಸಿದರು.
ಈ ಟ್ರಾಮಾ ಸೆಂಟರ್ ಗಳ ಪ್ರಯೋಜನ ದೇಶದ ಉದ್ದಗಲಕ್ಕೂ ಲಭ್ಯವಾಗುವ ನಿಟ್ಟಿನಲ್ಲಿ ತುರ್ತು ಚಿಕಿತ್ಸಾ ಕೇಂದ್ರಗಳ ನಡುವೆ ಪರಸ್ಪರ ಸಂಪರ್ಕ ಸಾಧ್ಯವಾಗಿಸುವ ಒಂದು ಜಾಲವನ್ನು ಸೃಷ್ಟಿಸಲಿದೆ.ಆಂಬುಲೆನ್ಸ್ ಸೇವೆ ಪ್ರತಿ 50 ಕಿ.ಮಿ. ವ್ಯಾಪ್ತಿಯಲ್ಲಿ ಲಭ್ಯವಾದರೆ ಟ್ರಾಮಾ ಸೆಂಟರುಗಳ ಸೇವೆ ಪ್ರತಿ 100 ಕಿ.ಮಿ.ಗೆ ಇರುವುದು. ಅಪಘಾತಕ್ಕೆ ತುತ್ತಾಗಿ ನೋವಿನಿಂದ ತತ್ತರಿಸುತ್ತಿರುವ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಕರೆದೊಯ್ಯುವ ಮಾರ್ಗದ ದೂರ 100-150 ಕಿಲೋಮೀಟರಿಗಿಂತ ಹೆಚ್ಚಾಗಿರಬಾರದು ಎಂಬುದು ಈ ಯೋಜನೆಯ ಧ್ಯೇಯ ಎಂದು ರಾಮ್ ದಾಸ್ ತಿಳಿಸಿದರು.
(ದಟ್ಸ್ ಕನ್ನಡವಾರ್ತೆ)












Click it and Unblock the Notifications