ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನಾಂಗ ನಿಂದನೆ : ಭಾರತ 'ರೈಟ್', ಆಸೀಸ್ ರಾಂಗ್

By Staff
|
Google Oneindia Kannada News

Indian skipper Anil Kumbleಕ್ಯಾನ್‌ಬೆರಾ, ಜ.09 : ಪುಟ್ಟ ಪೆಟ್ಟಿಗೆಯಲ್ಲಿ ಹೂತಿಡಬೇಕಾಗಿದ್ದ ಜನಾಂಗ ನಿಂದನೆಯ ಆರೋಪದ ಭೂತವನ್ನು ಬೃಹದಾಕಾರ ಪಡೆಯಲು ಬಿಟ್ಟವರು ಯಾರು?

ಕ್ರಿಕೆಟ್ ಜಗತ್ತಿನಲ್ಲಿ ನಡೆಯುತ್ತಿರುವ ಪ್ರತಿ ಚರ್ಚೆ, ಪಂಡಿತರ ವಿಶ್ಲೇಷಣೆ, ಹೊರಗೆಡಹದ ಕೆಲ ಸಂಗತಿಗಳು, ಕೊನೆಗೆ ಆಸ್ಟ್ರೇಲಿಯಾದ ಖ್ಯಾತ ಕ್ರೀಡಾಳುಗಳು ಕೂಡ 'ಕಿರಿಕ್' ಪಾಂಟಿಂಗ್ ಪಡೆಯತ್ತ ಬೆರಳನ್ನು ತೋರಿಸುತ್ತಿವೆ.

ಹರ್‌ಭಜನ್ ಸಿಂಗ್ ಆಸ್ಟ್ರೇಲಿಯಾದ ಸೈಮಂಡ್ಸ್ ವಿರುದ್ಧ ಮಾಡಿರುವರೆನ್ನಲಾದ ಜನಾಂಗ ನಿಂದನೆ ಭೂತಾಕಾರ ಪಡೆಯುವ ಮೊದಲೇ ಹೊಸಕಿ ಹಾಕಲು ಪಾಂಟಿಂಗ್‌ಗೆ ಅವಕಾಶವಿತ್ತು. ಆದರೆ, ತಾವು ಏನು ಮಾಡಿದರೂ ನಡೆಯುತ್ತದೆ, ಬೇರೆಯವರ ಮಾತನ್ನೇನು ಕೇಳುವುದು ಎಂಬಂತೆ ದುರಹಂಕಾರದಿಂದ ವರ್ತಿಸಿದ ಆಸ್ಟ್ರೇಲಿಯಾದ ನಾಯಕ ರಿಕಿ ಪಾಂಟಿಂಗ್ ಈಗ ಮೈಯೆಲ್ಲಾ ಪರಚಿಕೊಳ್ಳುವಂತಾಗಿದೆ.

ಭಾರತದ ನಾಯಕ ಅನಿಲ್ ಕುಂಬ್ಳೆ, ನಿಂದನೆ ಆರೋಪದ ವಿಚಾರಣೆ ಮೂರನೇ ಅಂಪೈರ್ ಪ್ರಾಕ್ಟರ್ ಮುಂದೆ ಬರುವ ಮೊದಲೇ ದೂರನ್ನು ವಾಪಸ್ ಪಡೆಯುವಂತೆ ವಿನಂತಿಸಿದ್ದೆ ಎಂಬ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಆದರೆ, ಕುಂಬ್ಳೆ ಮಾತನ್ನು ಕಿವಿಗೇ ಹಾಕಿಕೊಳ್ಳದ ಪಾಂಟಿಂಗ್, ವರದಿ ಈಗಾಗಲೇ ಸಲ್ಲಿಸಿಯಾಗಿದೆ ಎಂದು ಉದಾಸೀನ ಮಾಡಿದರು ಎಂದು ಕುಂಬ್ಳೆ ತಿಳಿಸಿದ್ದಾರೆ.

ಬಿಸಿಸಿಐನ ಒತ್ತಡದಿಂದಾಗಿ ಕೆಟ್ಟ ನಿರ್ಣಯಗಳನ್ನು ನೀಡಿದ ಅನುಭವಿ ಅಂಪೈರ್ ಬಕ್ನರ್ ಅವರನ್ನು ಮನೆಗೆ ಕಳುಹಿಸಿ, ಭಜ್ಜಿಯನ್ನು ಮತ್ತೆ ಆಡುವಂತೆ ಐಸಿಸಿ ನಿರ್ಣಯಿಸಿರುವುದು ಆಸ್ಟ್ರೇಲಿಯಾಕ್ಕೆ ನುಂಗಲಾರದ ತುಪ್ಪದಂತಾಗಿದೆ.

ಭಾರತ 'ರೈಟ್', ಆಸೀಸ್ ರಾಂಗ್ : ಬೆಂಕಿಯಾಡದೇ ಹೊಗೆಯುಗುಳುವುದು ಸಾಧ್ಯವೇ ಇಲ್ಲ ಎಂದು ಭಾರತದ ಮಾಜಿ ಕೋಚ್ ಆಗಿದ್ದ ನ್ಯೂಜಿಲಂಡ್‌ನ ಜಾನ್ ರೈಟ್ ಈ ಪ್ರಹಸನವನ್ನು ವಿಶ್ಲೇಷಿಸಿದ್ದಾರೆ.

ಆಸ್ಟ್ರೇಲಿಯಾದ ಆಟಗಾರರು, ಅದರಲ್ಲೂ ಸೈಮಂಡ್ಸ್ ಹರ್‌ಭಜನ್‌ರನ್ನು ಕೆಣಕಿದ್ದರಿಂದಲೇ ಭಜ್ಜಿ ಸಿಟ್ಟನ್ನು ಹೊರಗೆಡಹಿದ್ದಾರೆ. ಹರ್‌ಭಜನ್ ಸಿಂಗ್ ತನ್ನಷ್ಟಕ್ಕೆ ತಾನೆ ಕೋಪವನ್ನು ಹೊರಹಾಕಿರಲು ಸಾಧ್ಯವೇ ಇಲ್ಲ. ಆಸ್ಟ್ರೇಲಿಯನ್ನರು ಕ್ರಿಕೆಟ್ ಹೇಗೆ ಆಡುತ್ತಾರೆಂದು ಇಡೀ ಜಗತ್ತಿಗೇ ಗೊತ್ತಿದೆ ಎಂದು ಟೀಕಿಸಿದ್ದಾರೆ. ಅಪ್ಪಟ ಶಾಂತಿ ನೆಲೆಸಿರಲು ಕ್ರಿಕೆಟ್ ಮೈದಾನವೇನು ಚರ್ಚ್ ಅಲ್ಲ ಎಂದು ರೈಟ್ ಮಾರ್ಮಿಕವಾಗಿ ನುಡಿದಿದ್ದಾರೆ.

ಪಾಕಿಸ್ತಾನದ ಮಾಜಿ ನಾಯಕ ಇಂಜಮಮ್-ಉಲ್-ಹಕ್ ಕೂಡ ಭಾರತದ ಪರವಹಿಸಿದ್ದಾರೆ. ಏಷ್ಯಾ ಉಪಖಂಡದ ಆಟಗಾರರನ್ನು ಕೆಣಕುವುದು ಆಸ್ಟ್ರೇಲಿಯನ್ನರಿಗೆ ಅಂಟಿದ ಜಾಡ್ಯ ಎಂದು ಅವರು ಜರಿದಿದ್ದಾರೆ.

ಸಾಲದೆಂಬಂತೆ ಆಸ್ಟ್ರೇಲಿಯಾದ ಖ್ಯಾತ ಕ್ರೀಡಾಪಟುಗಳು ಕೂಡ ಪಾಂಟಿಂಗ್ ಪಡೆ ಅತ್ಯಂತ ಕ್ರೀಡಾಹೀನ ಮನೋಭಾವದಿಂದ ವರ್ತಿಸಿದೆ ಎಂದು ದೂಷಿಸುತ್ತಿದ್ದಾರೆ. ಈ ಪ್ರಕರಣದಿಂದಾಗಿ ಆಸ್ಟ್ರೇಲಿಯಾದ ಪ್ರತಿಷ್ಠೆಗೆ ತೀವ್ರ ಧಕ್ಕೆಯುಂಟಾಗಿದೆ. ಇದನ್ನು ಕ್ರಿಕೆಟ್ ಆಸ್ಟ್ರೇಲಿಯಾ ಜೊತೆ ಚರ್ಚಿಸುವುದಾಗಿ ಆಸ್ಟ್ರೇಲಿಯಾ ಹಾಲ್ ಆಫ್ ಫೇಮ್‌ನ ಸದಸ್ಯರಾದ ಜಾನ್ ಬರ್ಟ್‌ರಾಂಡ್, ಹರ್ಬ್ ಎಲಿಯಟ್ ಮತ್ತು ರಾಬ್ ಡಿ ಕ್ಯಾಸ್ಟೆಲ್ಲಾ ಹೇಳಿದ್ದಾರೆ.

ಆಟ ಕೇವಲ ಆಟ ಮಾತ್ರ. ಅದು ಯುದ್ಧವಲ್ಲ. ಯಾವುದೇ ತರಹದಿಂದಲಾದರೂ ಗೆಲ್ಲಲೇಬೇಕೆಂಬ ಪಾಂಟಿಂಗ್ ಪಡೆಯ ಆಶಯ ಅವರಿಗೇ ಮುಳುವಾಗುತ್ತಿದೆ ಎಂದು ಬರ್ಟ್‌ರಾಂಡ್ ಹೇಳಿದ್ದಾರೆ.

(ಏಜೆನ್ಸಿಯಿಂದ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X