ಶ್ರೀರಾಮ ದೈವಾಂಶ ಸಂಭೂತ : ಎಚ್.ಡಿ.ದೇವೇಗೌಡ
ಬೆಂಗಳೂರು, ಸೆಪ್ಟೆಂಬರ್ 21 : ರಾಮ ನಿಜಕ್ಕೂ ಕಾಲ್ಪನಿಕ ವ್ಯಕ್ತಿಯಲ್ಲ ಆತ ಅವತಾರ ಪುರುಷ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಶುಕ್ರವಾರ ಹೇಳಿದ್ದಾರೆ.
ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆ ಜೆಡಿಎಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ನಂತರ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು, ರಾಮಸೇತು ಸ್ವಾಭಾವಿಕವಾಗಿ ರೂಪುಗೊಂಡದ್ದಲ್ಲ ಅದು ದೇವರ ಸೃಷ್ಟಿ. ರಾಮನ ವಿಚಾರದಲ್ಲಿ ಲಘುವಾಗಿ ಮಾತನಾಡುವುದು ತಪ್ಪು ಎಂದು ರಾಮಸೇತು ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.
ರಾಮಸೇತು ಮಾನವ ನಿರ್ಮಿತ ಎಂಬುದನ್ನು ನಾನು ಒಪ್ಪುವುದಿಲ್ಲ. ರಾಮನ ವಿಚಾರದಲ್ಲಿ ಭಿನ್ನಾಭಿಪ್ರಾಯ ಬರಬಾರದು. ನಾನು ಮತ್ತು ನಮ್ಮ ಪಕ್ಷ ಎಲ್ಲ ಧರ್ಮಿಯರನ್ನು ಗೌರವಿಸುತ್ತೇವೆ. ನಾನು ದೇವಸ್ಥಾನ, ಚರ್ಚ್, ಮಸೀದಿ, ಎಲ್ಲಾ ಕಡೆ ಹೋಗುತ್ತೇನೆ ಎಂದು ದೇವೇಗೌಡರು ನುಡಿದರು.
ಬೆಂಗಳೂರಿನಲ್ಲಿ ಬಸ್ ಸುಟ್ಟುಹಾಕಿದ ಪ್ರಕರಣ ಮತ್ತು ಕರುಣಾನಿಧಿ ಪುತ್ರಿ ಮನೆ ಮೇಲಿನ ದಾಳಿಯನ್ನು ಖಂಡಿಸಿದ ದೇವೇಗೌಡರು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಇನ್ನೂ ಮೂವರ ಬಂಧನ : ಕರುಣಾನಿಧಿ ಮಗಳು ಸೆಲ್ವಿ ಮನೆಮೇಲೆ ದಾಳಿ ನಡೆಸಿದರೆನ್ನಲಾದ ಇನ್ನೂ ಮೂವರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಬಂಧಿತರಲ್ಲಿ ಒಬ್ಬ ನ್ಯಾಯವಾದಿಯಾಗಿದ್ದು ಉಳಿದಿಬ್ಬರಿಗೆ ಆಶ್ರಯ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಯಲ್ಲಿ ಉಪಯೋಗಿಸಲಾದ ಒಂದು ದ್ವಿಚಕ್ರ ವಾಹನವನ್ನೂ ಜಪ್ತಿ ಮಾಡಿಕೊಂಡಿದ್ದಾರೆ.
ನ್ಯಾಯವಾದಿ ರಂಗಸ್ವಾಮಿ ಸೆಲ್ವಿ ಮನೆ ದಾಳಿಯಲ್ಲಿ ನೇರವಾಗಿ ಭಾಗಿಯಾಗಿದ್ದ. ಉಳಿದಿಬ್ಬರನ್ನು ಮುರುಗನ್ ಮತ್ತು ರಾಜೇಶ್ ಎಂದು ಗುರುತಿಸಲಾಗಿದೆ. ಈ ಮೂವರು ಬಸ್ ಸುಟ್ಟ ಘಟನೆಯಲ್ಲೂ ಭಾಗಿಯಾಗಿದ್ದರೆಂದು ಪೊಲೀಸರು ಹೇಳಿದ್ದಾರೆ.
ಒಬ್ಬನ ಗುರುತು ಪತ್ತೆ : ರಾಮಸೇತು ವಿಷಯದಲ್ಲಿ ತಮಿಳುನಾಡು ಮುಖ್ಯಮಂತ್ರಿ ನೀಡಿದ ಹೇಳಿಕೆಗೆ ವಿರುದ್ಧವಾಗಿ ಹೊಸೂರು ರಸ್ತೆಯಲ್ಲಿ ಸುಡಲಾದ ಬಸ್ಸಿನಲ್ಲಿ ಸತ್ತ ವ್ಯಕ್ತಿ ಕುರ್ಪುಸ್ವಾಮಿ ಎಂದು ತಿಳಿದುಬಂದಿದೆ. 34ರ ಹರೆಯದ ಕುರ್ಪುಸ್ವಾಮಿ ತಮಿಳುನಾಡಿನ ಶಿವಗಿರಿಗೆ ಸೇರಿದವನು. ಇನ್ನೊಬ್ಬ ವ್ಯಕ್ತಿಯ ಗುರುತು ಇನ್ನೂ ಸಿಕ್ಕಿಲ್ಲ.
ಭಜರಂಗ ದಳದ ಹಸ್ತ : ತಮಿಳುನಾಡಿನ ಬಸ್ ದಹನ ಘಟನೆಯಲ್ಲಿ ಭಜರಂಗ ದಳದ ಪಾತ್ರವಿದೆ. ಈ ಸಂಬಂಧ 20ಮಂದಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ಮುಂದುವರೆಸಿದ್ದಾರೆ ಎಂದು ಸಂಜೆ ಪತ್ರಿಕೆಯೊಂದು ಗುರುವಾರ ವರದಿ ಮಾಡಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications