ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗಸ್ಟ್ 10ರಿಂದ ಬೆಸ್ತರಿಗೆ ಸುಗ್ಗಿಕಾಲ ಪ್ರಾರಂಭ

By Staff
|
Google Oneindia Kannada News

ಮಂಗಳೂರು, ಆಗಸ್ಟ್ 02 : ಚುಕ್ಕಾಣ ಚುಕ್ಕಿ ಹೊಯ್ಯ, ಚುಕ್ಕಾಣ ಚುಕ್ಕಿ ಹೊಯ್ಯ
ಅಲ್ಲೇ ಇದೆಯೋ ಬಾನಲ್ಲೇ ಇದೆಯೋ, ತಾರೆ ಅಲ್ಲೇ ಇದೆಯೋ

ಎಂದು ತಾರೆಗಳೆಣಿಸುತ್ತಾ ನೀಲಿ ಕಡಲ ಮೇಲೆ ಹೊಯ್ದಾಡುತ್ತಾ ಮೀನುಗಳನ್ನು ಬುಟ್ಟಿಗೆ ಹಾಕಿಕೊಳ್ಳುತ್ತಾ ಹೊಟ್ಟೆಪಾಡನ್ನು ನೋಡಿಕೊಳ್ಳುವ ಕಾಲ ಹತ್ತಿರವಾಗಿದೆ.

ಜೀವಸಂಗಾತಿ ದೋಣಿಯನ್ನು ಲಂಗರು ಹಾಕಿ ಒಂದು ಚಿಟಿಕೆ ನಿದ್ದೆಯಿಂದೆದ್ದು ಮೈಮುರಿದುಕೊಳ್ಳುತ್ತಾ ದೊಡ್ಡ ಮೀನಿಗಳನ್ನು ಹಿಡಿಯುವ ಇರುಳುಗನಸನ್ನು ಕಾಣಲು ದಕ್ಷಿಣ, ಉತ್ತರ ಕನ್ನಡದ ಮೀನುಗಾರರು ಶುರುಮಾಡಿಕೊಂಡಿದ್ದಾರೆ.

ಪ್ರತಿವರ್ಷ ಆಗಸ್ಟ್ 1ರಿಂದ ಪ್ರಾರಂಭವಾಗಬೇಕಿದ್ದ ಮೀನುಸುಗ್ಗಿಯ ಸಮಯವನ್ನು ಆಗಸ್ಟ್ 10ಕ್ಕೆ ರಾಜ್ಯ ಸರ್ಕಾರ ನಿಗದಿಪಡಿಸಿದೆ.

ಮಳೆಗಾಲದಲ್ಲಿ 67 ದಿನಗಳ ಬಿಡುವಿನ ಕಾಲವನ್ನು ಸರ್ವೋಚ್ಚ ನ್ಯಾಯಾಲಯ 52 ದಿನಗಳಿಗೆ ಇಳಿಸಿರುವುದು ಮೀನುಗಾರರಲ್ಲಿ ಸಂತಸವನ್ನುಂಟು ಮಾಡಿದೆ. ಹೆಚ್ಚು ದಿನಗಳ ಕಾಲ ಸಾಗರದಲ್ಲಿದ್ದು ಕಳೆದೆರಡು ವರುಷಗಳಿಂದ ಕೈಗಳಿಂದ ನುಣುಚಿಕೊಂಡಿದ್ದ ಮೀನುಗಳನ್ನು ಹಿಡಿಯುವ ಕನಸಿನ ದೋಣಿಯಲ್ಲಿ ಅವರೀಗಾಗಲೆ ತೇಲುತ್ತಿದ್ದಾರೆ.

ಕಟ್ಟಿಟ್ಟ ಬಲೆಗೆ ತೂತುಬಿದ್ದೆಡೆ ತೇಪೆ ಹಚ್ಚುತ್ತ, ಗ್ರೀಸು ಕಾಣದೆ ತೆಪ್ಪಗೆ ಬಿದ್ದಿದ್ದ ಇಂಜೀನಿಗೆ ಗ್ರೀಸನ್ನು ಸವರುತ್ತ, ಬಣ್ಣಕಾಣದೆ ಸಪ್ಪೆಮೋರೆ ಮಾಡಿದ್ದ ದೋಣಿಗೆ ಬಣ್ಣ ಹಚ್ಚುವಲ್ಲಿ ಬೆಸ್ತರು ವ್ಯಸ್ತರಾಗಿದ್ದಾರೆ.

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಕರಾವಳಿಗುಂಟ ಎರಡೂವರೆ ಲಕ್ಷಕ್ಕೂ ಹೆಚ್ಚು ಬೆಸ್ತರು ಮೀನುಗಾರಿಕೆಯನ್ನೇ ಜೀವನಾಧಾರವನ್ನಾಗಿ ಮಾಡಿಕೊಂಡಿದ್ದಾರೆ. 300 ಕಿ.ಮೀ. ಉದ್ದದ ಕರಾವಳಿಯಲ್ಲಿ ಸುಮಾರು 30 ಸಾವಿರ ಸಣ್ಣ, ಮಧ್ಯಮ, ದೊಡ್ಡ ಪ್ರಮಾಣದ ದೋಣಿಗಳು ಸಾಗರಕ್ಕಿಳಿಯುತ್ತವೆ. ಕಳೆದ ವರ್ಷ ಒಟ್ಟು 88 ಸಾವಿರ ಬಗೆಬಗೆಯ ಮೀನುಗಳನ್ನು ಹಿಡಿದಿದ್ದ ಬೆಸ್ತರು 340 ಕೋಟಿ ರು. ವಹಿವಾಟನ್ನು ಮಾಡಿದ್ದರು.

ರಜಾ ದಿನಗಳನ್ನು ಕಡಿತಗೊಳಿಸಿದ್ದರೂ ಬೆಸ್ತರಲ್ಲಿ ಮಂದಹಾಸವೇನೂ ಮೂಡಿಲ್ಲ. ವಿಪರೀತ ಹವಾಮಾನದಿಂದಾಗಿ ಮಳೆಗಾಲದಲ್ಲಿ ಮತ್ತು ಬಿರುಗಾಳಿ ಎದ್ದ ಸಂದರ್ಭದಲ್ಲಿ ಮೀನು ಹಿಡಿಯುವುದೇ ದುಸ್ಸಾಹಸ. ಎಚ್ಚರಿಕೆ ಮೀರಿ ಹುಂಬತನ ಮಾಡಿದವರ ಜೀವಕ್ಕೇ ಎರವಾಗಿದೆ ಸಾಗರ. ಈ ಎಲ್ಲ ಅನನುಕೂಲಗಳೊಂದಿಗೆ ಇದೇ 10ರಿಂದ ಶುರುವಾಗಲಿದೆ ಮೀನುಗಾರರಿಗೆ ಸುಗ್ಗಿ.

(ಯುಎನ್ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X