ಬಂತು ವಾರೆಂಟ್ :ಮುಖ್ಯ ಕಾರ್ಯದರ್ಶಿಗೆ ಪೀಕಲಾಟ!
ಬೆಂಗಳೂರು, ಜುಲೈ 17 : ಕೋರ್ಟ್ ಆದೇಶ ಪಾಲನೆ ಮಾಡದ ಆರೋಪದ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ಬಿ.ಮಹಿಷಿ ಅವರಿಗೆ ಹೈಕೋರ್ಟ್ ಜಾಮೀನು ರಹಿತ ವಾರಂಟ್ ಹೊರಡಿಸಿದೆ.
ನಗರದ ಕೊಡಿಗೇಹಳ್ಳಿಯಲ್ಲಿರುವ ಬಾಲಾಜಿ ಲೇಔಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರಂಟ್ ಹೊರಡಿಸಲಾಗಿದೆ. ಜುಲೈ 23ರಂದು ಮಹಿಷಿ ಖುದ್ದು ನ್ಯಾಯಾಲಯದ ಮುಂದೆ ಹಾಜರಾಗಬೇಕೆಂದು ನ್ಯಾಯಮೂರ್ತಿ ರಾಮಮೋಹನ ರೆಡ್ಡಿಆದೇಶಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಬೇಕೆಂದು ನ್ಯಾಯಮೂರ್ತಿಗಳು ಈ ಹಿಂದೆ ಆದೇಶಿಸಿದ್ದರು. ಆದರೆ ದಾಖಲೆಗಳು ಕಳೆದು ಹೋಗಿವೆ ಎಂದು ಅಧೀನ ಕಾರ್ಯದರ್ಶಿ(ಭೂಸ್ವಾಧೀನ) ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ್ದರು.
ಇದಾದ ಮೇಲೆ ಹೇಗೆ ಕಾಣೆಯಾಗಿವೆ ಎಂಬ ವಿವರಣೆ ನೀಡಬೇಕೆಂದು ನ್ಯಾಯಮೂರ್ತಿ ಪುನಃ ಆದೇಶಿಸಿದ್ದರು. ಈ ಕುರಿತು ಮುಖ್ಯ ಕಾರ್ಯದರ್ಶಿಗಳು ಕೂಡ ಪ್ರಮಾಣ ಪತ್ರ ಸಲ್ಲಿಸಿದ್ದರು.
ವಿವರಗಳು ಒಂದಕ್ಕೊಂದು ಸಂಬಂಧವಿಲ್ಲದಿರುವುದು ಹಾಗೂ ಸರಿಯಾದ ರೂಪದಲ್ಲಿ ಇಲ್ಲದಿರುವುದು ಕೋರ್ಟ್ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ವಾರಂಟ್ ಹೊರಡಿಸಲಾಗಿದೆ.
(ಯುಎನ್ಐ)












Click it and Unblock the Notifications