ತುಮಕೂರು ಜೈಲಿಗೆ ಕನ್ನ :ಎಂಟು ಜೈಲುಹಕ್ಕಿಗಳು ಪರಾರಿ!
ತುಮಕೂರು,ಜುಲೈ 13: ಮನೆ ಅಥವಾ ಅಂಗಡಿಗೆ ಕನ್ನ ಹಾಕುವುದನ್ನು ನಾವು ಕೇಳಿದ್ದೇವೆ, ಓದಿದ್ದೇವೆ. ಆದರೆ ಜೈಲಿನ ಗೋಡೆಗೆ ಕನ್ನ ಹಾಕಿ, 8ಮಂದಿ ಕೈದಿಗಳು ನಗರದಲ್ಲಿ ಪರಾರಿಯಾಗಿದ್ದಾರೆ.
ಜಿಲ್ಲಾ ಉಪ ಕಾರಾಗೃಹದಲ್ಲಿ ಗುರುವಾರ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ತಪ್ಪಿಸಿಕೊಂಡಿರುವ ಕೈದಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಈಗಾಗಲೇ ನಗರದ ವಿವಿಧ ಭಾಗಗಳಲ್ಲಿ ಮೂವರನ್ನು ಬಂಧಿಸಿದ್ದಾರೆ.
ಶೌಚಾಲಯದ ಗೋಡೆಗೆ ಕಬ್ಬಿಣದ ಬಕೆಟ್‌ನ ಹಿಡಿ ಬಳಸಿ, ಕನ್ನ ಕೊರೆದು ತಪ್ಪಿಸಿಕೊಂಡಿದ್ದಾರೆ. ತಪ್ಪಿಸಿಕೊಂಡವರ ಪೈಕಿ ಇಬ್ಬರು ಕೊಲೆ ಮತ್ತು ಆರು ಮಂದಿ ಕಳ್ಳತನ ಕೇಸುಗಳಲ್ಲಿ ಭಾಗಿಯಾದವರು.
ಕೇಂದ್ರ ವಲಯದ ಡಿಜಿಪಿ ದೊರೆಸ್ವಾಮಿ ಈ ಬಗ್ಗೆ ಸುದ್ದಿಗಾರರಿಗೆ ಇಂದು ಮಾಹಿತಿ ಒದಗಿಸಿದ್ದಾರೆ. ಜೈಲಿನ ಕಟ್ಟಡ ಹಳೆಯದು. ಇಲ್ಲಿ 69 ಕೈದಿಗಳಿಗೆ ಮಾತ್ರ ವ್ಯವಸ್ಥೆ ಇದೆ. ಆದರೆ 240ಕೈದಿಗಳನ್ನು ತುಂಬಲಾಗಿದೆ. ಕೇವಲ 17ಮಂದಿ ಮಾತ್ರ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ದೊರೆಸ್ವಾಮಿ ಹೇಳಿದ್ದಾರೆ.
(ಯುಎನ್ಐ)











Click it and Unblock the Notifications