ಕೊನೆಗೂ ಸಾಲಮನ್ನಾ... ಸಾರಾಯಿ ಮತ್ತು ಲಾಟರಿ ಬಂದ್
ಬೆಂಗಳೂರು : ಕೊನೆಗೂ ಸರ್ಕಾರ ಮಾತು ಉಳಿಸಿಕೊಂಡಿದೆ. ಕೃಷಿ ಸಾಲಮನ್ನಾ, ಸಾರಾಯಿ ಮತ್ತು ಲಾಟರಿ ನಿಷೇಧಕ್ಕೆ ಮುಂದಾಗಿದೆ. ಅದರ ಪರಿಣಾಮಗಳನ್ನು ಮುಂದಿನ ದಿನಗಳಲ್ಲಿ ನೋಡಬೇಕು.
-ಉಪಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವ ಬಿ.ಎಸ್.ಯಡಿಯೂರಪ್ಪ, ಶುಕ್ರವಾರ ಬಜೆಟ್ ಮಂಡಿಸುತ್ತ , 25,000ರೂಪಾಯಿವರೆಗಿನ ಅಲ್ಪಾವಧಿ ಬೆಳೆಸಾಲ ಮನ್ನಾ ಮಾಡಲಾಗುವುದು. ಏಪ್ರಿಲ್ 1, 2006ರಿಂದ ಡಿಸೆಂಬರ್ 31, 2006ರ ನಡುವೆ ಸಾಲಪಡೆದವರು ಮನ್ನಾ ಯೋಜನೆ ವ್ಯಾಪ್ತಿಗೆ ಬರುತ್ತಾರೆ ಎಂದರು.
ಇದೇ ಅವಧಿಯಲ್ಲಿ 25,000 ರೂಪಾಯಿಗೂ ಹೆಚ್ಚು ಪ್ರಮಾಣದ ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲ ಪಡೆದವರು ಮಾರ್ಚ್ 31, 2007ರೊಳಗೆ ಅಸಲು ಪಾವತಿಸಿದರೆ, ಅಂಥವರ ಪೂರ್ಣ ಬಡ್ಡಿ ಮನ್ನಾ ಮಾಡಲಾಗುವುದು ಎಂದು ಪ್ರಕಟಿಸಿದರು.
ಲಾಟರಿ ಬಂದ್ : ಏಪ್ರಿಲ್ 1ರಿಂದ ಕರ್ನಾಟಕ ಲಾಟರಿ ಮುಕ್ತ ರಾಜ್ಯವಾಗಲಿದೆ ಎಂದು ಘೋಷಿಸಿದ ಯಡಿಯೂರಪ್ಪ, ಲಾಟರಿ ನಿಷೇಧದಿಂದ ರಾಜ್ಯದ ಬೊಕ್ಕಸಕ್ಕೆ 250ಕೋಟಿ ರೂಪಾಯಿಗಳ ನಷ್ಟವಾಗಲಿದೆ ಎಂದು ತಿಳಿಸಿದರು.
ಸಾರಾಯಿ ಬಂದ್ : ರಾಜ್ಯಾದ್ಯಂತ ಪ್ರಸ್ತುತ 15,248 ಅಂಗಡಿಗಳಲ್ಲಿ ಸಾರಾಯಿ ಮಾರಾಟ ಮಾಡಲಾಗುತ್ತಿದೆ. ಜುಲೈ 1ರಿಂದ ಸಾರಾಯಿ ಮಾರಾಟ ನಿಷೇಧಿಸಲಾಗುತ್ತಿದ್ದು, ಇದರಿಂದ ರಾಜ್ಯದ ಬೊಕ್ಕಸಕ್ಕೆ 1,905ಕೋಟಿ ರೂಪಾಯಿ ನಷ್ಟವಾಗಲಿದೆ ಎಂದರು.
ತೆರಿಗೆ ಸಂಗ್ರಹದಲ್ಲಿ ಸುಧಾರಣೆ ತರುವುದರ ಮೂಲಕ ಹಾಗೂ ವಿವಿಧ ವರ್ಗಗಳ ಮದ್ಯ ಮಾರಾಟಗಾರರ ಪರವಾನಿಗೆ ಶುಲ್ಕ ಹೆಚ್ಚಿಸುವ ಮೂಲಕ, ಬೊಕ್ಕಸಕ್ಕಾಗುವ ನಷ್ಟವನ್ನು ಲಾಭವಾಗಿ ಪರಿವರ್ತಿಸಲಾಗುವುದು ಎಂದು ಅವರು ವಿವರಿಸಿದರು.
ತೆರಿಗೆ ಹೇಗೆ? : ಕೆಲವು ಸರಕುಗಳ ಮೇಲಿನ ಮಾರಾಟ ತೆರಿಗೆ ಇಳಿಸಿರುವ ಸರ್ಕಾರ, ರೇಸ್ ಕುದುರೆ ಮಾಲೀಕರು, ಜಾಕಿಗಳು ಹಾಗೂ ಬುಕಿಗಳ ಮೇಲೆ ವೃತ್ತಿತೆರಿಗೆ ಹೇರಿದ್ದಾರೆ.
ವೃತ್ತಿತೆರಿಗೆ ಯಾದಿಯಲ್ಲಿ ಮಸಾಜ್ ಪಾರ್ಲರುಗಳನ್ನು ಸೇರಿಸಲಾಗಿದ್ದು, ತೆರಿಗೆ ಪ್ರಮಾಣವನ್ನು ವಿವರಣೆ ನೀಡಿಲ್ಲ. ಅಲ್ಲದೆ ವಿಶೇಷ ಆರ್ಥಿಕ ಯೋಜನೆಗಾಗಿ ಭೂಮಿ ಖರೀದಿಸಲು, ಭೂ ಅಭಿವೃದ್ಧಿದಾರಿಗೆ ಅವಕಾಶ ಮಾಡಿಕೊಡಲಾಗಿದೆ.
ಬಜೆಟ್ ಬಗ್ಗೆ ಇನ್ನಷ್ಟು :
- ಅಕ್ಕಿ, ಗೋಧಿ, ದ್ವಿದಳ ಧಾನ್ಯಗಳ ಮೇಲಿನ ತೆರಿಗೆ ವಿನಾಯಿತಿ ಮುಂದುವರಿಕೆ
- ಕೆಲವು ಕ್ಷೇತ್ರಗಳಲ್ಲಿ ವೃತ್ತಿ ತೆರಿಗೆಗಳನ್ನು ಸಂಸ್ಥೆಗಳೇ ಪಾವತಿಸಬೇಕು.
- ಟೈರು, ಟ್ಯೂಬ್ ತೆರಿಗೆ ಶೇ.12ರಿಂದ 4ಕ್ಕೆ ಇಳಿಕೆ
- ಮಾಸಿಕ ರಿಟರ್ನ್ ವಿಳಂಬಕ್ಕೆ ವಿಧಿಸುವ ದಂಡದ ಪ್ರಮಾಣ ಇಳಿಕೆ
- ಅಬಕಾರಿ ಕಾಯ್ದೆಯಲ್ಲಿ ಕಾಕಂಬಿ, ಆಲ್ಕೋಹಾಲ್ ಮೇಲೆ ಶೇ.20ರಷ್ಟು ತೆರಿಗೆ
- ನಾಟಕಗಳಿಗೆ ಮನರಂಜನಾ ತೆರಿಗೆ ರದ್ದು
- ಮನರಂಜನ ತೆರಿಗೆ ಶೇ.10ರಿಂದ 6ಕ್ಕೆ ಇಳಿಕೆ











Click it and Unblock the Notifications