ಹೆಲ್ಮೆಟ್ ಬೇಡವೆಂದವ, ತನ್ನ ಜೀವವನ್ನೇ ಕಳೆದುಕೊಂಡ!
ಬೆಂಗಳೂರು : ಹೆಲ್ಮೆಟ್ ಬಳಕೆ ಕಡ್ಡಾಯಕ್ಕೆ ಸಾರ್ವಜವಿಕರು ಅಸಮಾಧಾನ ವ್ಯಕ್ತಪಡಿಸುತ್ತಿರುವ ಬೆನ್ನಲ್ಲಿಯೇ, ಹೆಲ್ಮೆಟ್ ಬಳಸದ ನಗರದ ದ್ವಿಚಕ್ರವಾಹನ ಸವಾರನೊಬ್ಬ ಮೃತಪಟ್ಟಿದ್ದಾನೆ.
ಮೃತನನ್ನು ಬಿಸ್ಮಿಲ್ಲಾ ನಗರದ ಬಾಬು(42) ಎಂದು ಗುರ್ತಿಸಲಾಗಿದೆ. ಲಾಲ್‌ಬಾಗ್ ಮುಖ್ಯರಸ್ತೆ ಸಮೀಪದಲ್ಲಿರುವ ಮರಿಗೌಡ ರಸ್ತೆಯಲ್ಲಿ, ಬಿಎಂಟಿಸಿ ಬಸ್ ಡಿಕ್ಕಿ ಹೊಡೆದದ್ದರಿಂದ ತಲೆಗೆ ತೀವ್ರ ಪೆಟ್ಟಾಯಿತು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬಾಬು ಕೊನೆ ಉಸಿರೆಳೆದ. ಹೆಲ್ಮೆಟ್ ಕಡ್ಡಾಯ ಬಳಕೆ ಬೆಂಗಳೂರಿನಲ್ಲಿ ಸೋಮವಾರದಿಂದ ಜಾರಿಗೆ ಬಂದಿದ್ದು, ಮೊದಲ ದಿನವೇ ಈ ಅಪಘಾತ ಸಂಭವಿಸಿದೆ.
ಇಬ್ಬರಿಗೂ ಹೆಲ್ಮೆಟ್ : ಹೆಲ್ಮೆಟ್ ಗೊಂದಲ ಮುಂದುವರೆದಿದೆ. ಸರ್ಕಾರ ದ್ವಿಚಕ್ರವಾಹನಗಳ ಹಿಂಬದಿ ಸವಾರರಿಗೆ ಹೆಲ್ಮೆಟ್‌ನಿಂದ ವಿನಾಯಿತಿ ನೀಡಿರುವುದಾಗಿ ಹೇಳುತ್ತಿದ್ದರೆ, ಪೊಲೀಸ್ ಇಲಾಖೆ ಎಲ್ಲರಿಗೂ ಹೆಲ್ಮೆಟ್ ಕಡ್ಡಾಯ ಎನ್ನುತ್ತಿದೆ.
ಮುಂದಿನ ಎರಡು ದಿನಗಳಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಹೊರಬರಲಿದೆ. ಹೆಚ್ಚುತ್ತಿರುವ ರಸ್ತೆ ಅಪಘಾತಗಳ ಹಿನ್ನೆಲೆಯಲ್ಲಿ ಹೆಲ್ಮೆಟ್ ಕಡ್ಡಾಯ, ಜೊತೆಗೆ ಹಿಂಬದಿ ಸವಾರರಿಗೂ ಅನಿವಾರ್ಯ ಎಂದು ನಗರ ಪೊಲೀಸ್ ಆಯುಕ್ತ ನೀಲಂ ಅಚ್ಯುತರಾವ್ ಅಭಿಪ್ರಾಯಪಟ್ಟಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications