ಕವಿ-ವಿಮರ್ಶಕ ಜಿ.ಎಸ್.ಶಿವರುದ್ರಪ್ಪಗೆ ರಾಷ್ಟ್ರಕವಿ ಗೌರವ?
ಬೆಂಗಳೂರು : ಹಿರಿಯ ಕವಿ-ವಿಮರ್ಶಕ ಡಾ.ಜಿ.ಎಸ್.ಶಿವರುದ್ರಪ್ಪ ಅವರಿಗೆ ರಾಷ್ಟ್ರಕವಿ ಗೌರವ ನೀಡಬೇಕೆಂದು ಆಯ್ಕೆ ಸಮಿತಿ ಶಿಫಾರಸು ಮಾಡಿದೆ.
ಹಿರಿಯ ಸಾಹಿತಿ ಡಾ.ದೇ.ಜವರೇಗೌಡ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಈ ಕುರಿತು ಸರ್ವಾನುತಮದ ನಿರ್ಣಯ ತೆಗೆದುಕೊಳ್ಳಲಾಗಿದ್ದು, ಶೀಘ್ರದಲ್ಲೇ ಶಿಫಾರಸು ಪತ್ರವನ್ನು ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಮೂಲಗಳು ಹೇಳಿವೆ.
ಕನ್ನಡಭವನದಲ್ಲಿ ನಡೆದ ಈ ಸಭೆಯಲ್ಲಿ, ಸಮಿತಿ ಸದಸ್ಯರಾದ ಡಾ.ಬಿ.ಎ.ವಿವೇಕ ರೈ, ಕಮಲಾ ಹಂಪನಾ, ಡಾ.ಸಿದ್ಧಲಿಂಗಯ್ಯ ಭಾಗವಹಿಸಿದ್ದರು. ಇನ್ನಿಬ್ಬರು ಸದಸ್ಯರಾದ ಪ್ರೊ.ಬರಗೂರು ರಾಮಚಂದ್ರಪ್ಪ, ಪ್ರೊ.ಕೆ.ಎಸ್.ನಿಸಾರ್ ಅಹಮದ್ ಸಭೆಯಲ್ಲಿ ಪಾಲ್ಗೊಳ್ಳಲಿಲ್ಲ.
ಬೇಂದ್ರೆಯವರೇ ಈ ಗೌರವಕ್ಕೆ ಅರ್ಹರು ಎಂದು ಕೆಲವು ಸದಸ್ಯರು ಪ್ರತಿಪಾದಿಸಿದರು. ಆದರೆ ಜೀವಂತ ಇರುವ ಕವಿಗಳನ್ನು ಗೌರವಿಸುವುದು ಸರ್ಕಾರದ ಉದ್ದೇಶವಾಗಿರುವುದರಿಂದ ಕೊನೆಯ ಗಳಿಗೆಯಲ್ಲಿ ಬೇಂದ್ರೆಯವರ ಹೆಸರು ಕೈಬಿಡಲಾಯಿತು. ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಜಿ.ಎಸ್.ಶಿವರುದ್ರಪ್ಪ ಅವರ ಸಲ್ಲಿಸಿರುವ ಸೇವೆ ಮನಗಂಡು ಈ ಗೌರವಕ್ಕೆ ಆಯ್ಕೆ ಮಾಡಲಾಯಿತು.
ಕವಿಗಳಾದ ಪ್ರೊ.ಕೆ.ಎಸ್.ನಿಸಾರ್ ಅಹಮದ್, ಚೆನ್ನವೀರ ಕಣವಿ, ಚಂದ್ರಶೇಖರ ಕಂಬಾರ ಅವರ ಹೆಸರುಗಳೂ ಸಭೆಯಲ್ಲಿ ಪ್ರಸ್ತಾಪಗೊಂಡವು ಎಂದು ಮೂಲಗಳು ಸ್ಪಷ್ಟಪಡಿಸಿವೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications