ಉಪಲೋಕಾಯುಕ್ತರ ಮೇಲೆ ವೆಂಕಟಾಚಲ ವಾಗ್ದಾಳಿ
ಉಪಲೋಕಾಯುಕ್ತರ ಮೇಲೆ ವೆಂಕಟಾಚಲ ವಾಗ್ದಾಳಿ
ಲೋಕಾಯುಕ್ತವನ್ನು ಸಮ್ಮಿಶ್ರ ಸರ್ಕಾರ ಒಡೆದು ಆಳುತ್ತಿದೆ -ವೆಂಕಟಾಚಲ
ಉಪಲೋಕಾಯುಕ್ತರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿರುವ ಲೋಕಾಯುಕ್ತ ಎನ್.ವೆಂಕಟಾಚಲ ಸುದ್ದಿಗಾರರೊಂದಿಗೆ ಮಾತನಾಡಿ, ಭ್ರಷ್ಟಾಚಾರ ನಿಯಂತ್ರಣಕ್ಕೆ ಸಹಕರಿಸುವ ಮನಸ್ಸಿಲ್ಲದಿದ್ದರೆ ಉಪ ಲೋಕಾಯುಕ್ತರು ಆರು ತಿಂಗಳು ರಜೆ ತೆಗೆದುಕೊಂಡು ಮನೆಗೆ ಹೋಗಲಿ. ನಾನೇ ಎಲ್ಲ ಪ್ರಕರಣಗಳನ್ನು ಇತ್ಯರ್ಥಗೊಳಿಸುತ್ತೇನೆ ಎಂದರು.
ನನಗೆ ಎಲ್ಲ ಇಲಾಖೆಯ ಮೇಲೆ ದಾಳಿ ನಡೆಸುವ ಅಧಿಕಾರವಿಲ್ಲ ಎಂಬ ಹೇಳಿಕೆ ಮೂಲಕ ಉಪಲೋಕಾಯುಕ್ತರು ಭ್ರಷ್ಟ ಅಧಿಕಾರಿಗಳ ರಕ್ಷಣೆಗೆ ನಿಂತಿದ್ದಾರೆ. ಇಂತಹ ಹೇಳಿಕೆಗಳಿಂದ ಸಾರ್ವಜನಿಕರು ಇಲಾಖೆಯ ವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ. ಭ್ರಷ್ಟರು ಮತ್ತಷ್ಟು ಬಲಗೊಳ್ಳುತ್ತಾರೆ ಎಂದು ಹೇಳಿದರು.
ಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರ ನೀಡದ ರಾಜ್ಯ ಸರ್ಕಾರ ಉಪಲೋಕಾಯುಕ್ತ ಹುದ್ದೆಯನ್ನು ಸೃಷ್ಟಿಸುವ ಮೂಲಕ ಇಲಾಖೆಯನ್ನು ಒಡೆದು ಆಳುತ್ತಿದೆ ಎಂದು ದೂರಿದರು. ತಪ್ಪು ಮಾಹಿತಿಗಳಿಂದ ಜನರನ್ನು ದಾರಿತಪ್ಪಿಸುತ್ತಿರುವ ಉಪಲೋಕಾಯುಕ್ತರು, ಇಲಾಖೆಯ ಬಗ್ಗೆ ಟೀಕೆ ಟಿಪ್ಪಣಿಗಳಲ್ಲಿಯೇ ಸಮಯವನ್ನು ವ್ಯಯಮಾಡುತ್ತಿದ್ದಾರೆ. ಆದರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಅಧಿಕಾರ ನನಗಿಲ್ಲ ಎಂದು ವೆಂಕಟಾಚಲ ಆಸಹಾಯಕತೆ ವ್ಯಕ್ತಪಡಿಸಿದರು.
ವ್ಯತ್ಯಾಸಗಳಿವೆ : ಈ ಬಗ್ಗೆ ಪ್ರತಿಕ್ರಿಯಿಸಿರುವ ಉಪಲೋಕಾಯುಕ್ತ ಜಿ.ಪತ್ರಿಬಸವನಗೌಡ, ನನಗೆ ಅಂತಹ ಭಾಷೆ(ವೆಂಕಟಾಚಲರ)ಬಳಸಲು ಬರುವುದಿಲ್ಲ. ಏಕೆಂದರೆ ನಾನು ಬೆಳೆದು ಬಂದ ವಾತಾವರಣವೇ ಬೇರೆ ಎಂದಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications