Get Updates
Get notified of breaking news, exclusive insights, and must-see stories!

ಪ್ಲೀಸ್‌ ನಂಬ್ರಿ! ಸೋನಿಯಾ ದಯೆಯಿಂದ ಸಂಪುಟ ವಿಸ್ತರಣೆ ಆಗಿದೆ !

ಪ್ಲೀಸ್‌ ನಂಬ್ರಿ! ಸೋನಿಯಾ ದಯೆಯಿಂದ ಸಂಪುಟ ವಿಸ್ತರಣೆ ಆಗಿದೆ !
ಸಮ್ಮಿಶ್ರ ಸರಕಾರದ ಬೇರುಗಳನ್ನೇ ಅಲುಗಾಡಿಸಿದ್ದ, ಸಂಪುಟ ವಿಸ್ತರಣೆ ಕಡೆಗೂ ಆಗಿದೆ. ದೇವೇಗೌಡ- ಕುಮಾರಸ್ವಾಮಿ ಮುನಿಸು, ಸೋನಿಯಾ ಅಸಮ್ಮತಿ, ಪಕ್ಷದಲ್ಲಿನ ಭಿನ್ನಮತ, ಈ ಎಲ್ಲದರ ನಡುವೆ ನಲುಗಿದ್ದ ಧರ್ಮಸಿಂಗ್‌, ಸಂಪುಟ ವಿಸ್ತರಣೆಯ ಸಾಹಸ ಪ್ರದರ್ಶಿಸಿದ್ದಾರೆ. ಅದರ ಪರಿಣಾಮವನ್ನು ಕಾದು ನೋಡ ಬೇಕು

ಬೆಂಗಳೂರು : ನಂಬಿದರೆ ನಂಬಿ ಬಿಟ್ಟರೇ ಬಿಡಿ! ಇದಂತೂ ನಿಜ. ಕಡೆಗೂ ಸೋನಿಯಾ ಮೇಡಂ ದಯೆಯಿಂದ ಮುಖ್ಯಮಂತ್ರಿ ಧರ್ಮಸಿಂಗ್‌ ತಮ್ಮ ಸಚಿವ ಸಂಪುಟವನ್ನು ಬುಧವಾರ(ಡಿ.15) ವಿಸ್ತರಿಸಿದ್ದಾರೆ. ಬೀಸೋ ದೊಣ್ಣೆಯಿಂದ ಪಾರಾಗಿ ಸರಕಾರ ಉಳಿಯಿತು ಎಂದು ಉಸ್ಸಪ್ಪ ಅನ್ನುತ್ತಿದ್ದಾರೆ.

ಬುಧವಾರ ಬೆಳಿಗ್ಗೆ ವಿಧಾನ ಸೌಧದಲ್ಲಿ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ನಡೆಯಿತು. ಜೆಡಿಎಸ್‌ನ 11 ಮಂದಿ, ಕಾಂಗ್ರೆಸ್‌ನ 9 ಮಂದಿ ಸೇರಿದಂತೆ ಒಟ್ಟು 20 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಹೀಗಾಗಿ ಧರ್ಮಸಿಂಗ್‌ ಸಚಿವ ಸಂಪುಟದ ಸಂಖ್ಯೆ 32 ಕ್ಕೆ ಏರಿದೆ.

ಕಾಂಗ್ರೆಸ್‌ನ ಹಿರಿಯ ನಾಯಕ ಡಿ.ಕೆ.ಶಿವಕುಮಾರ್‌, ಎ.ಕೃಷ್ಣಪ್ಪ ಸಂಪುಟ ಪ್ರವೇಶಿಸಲು ಸಾಧ್ಯವಾಗಿಲ್ಲ. ಹದಿನೆಂಟು ಮಂದಿ ಕ್ಯಾಬಿನೆಟ್‌ ದರ್ಜೆ ಸಚಿವರಾಗಿ, ಇಬ್ಬರು ರಾಜ್ಯ ಸಚಿವರಾಗಿ ರಾಜ್ಯಪಾಲ ಟಿ.ಎನ್‌. ಚತುರ್ವೇದಿ ಅವರಿಂದ ಪ್ರಮಾಣ ವಚನ ಸ್ವೀಕರಿಸಿದರು.

ನೂತನ ಸಂಚಿವರ ವಿವರ : ಆರ್‌.ವಿ.ದೇಶಪಾಂಡೆ, ಎಚ್‌.ಸಿ.ಮಹದೇವಪ್ಪ , ಗುರುಪಾದಪ್ಪ ನಾಗಮಾರಪಲ್ಲಿ, ಬಸವರಾಜ ಎಸ್‌. ಹೊರಟ್ಟಿ, ಎಚ್‌.ಕೆ.ಪಾಟೀಲ್‌, ಸಿ.ಚಿನ್ನಿಗಪ್ಪ, ಆರ್‌.ರಾಮಲಿಂಗ ರೆಡ್ಡಿ, ಡಿ. ಟಿ. ಜಯಕುಮಾರ್‌, ವೈ.ನಾಗಪ್ಪ, ಎಚ್‌.ಎಸ್‌. ಮಹದೇವ ಪ್ರಸಾದ್‌, ಅಂಜನಮೂರ್ತಿ, ಅಮರೇಗೌಡ ಪಾಟೀಲ್‌ ಬಯ್ಯಪುರ, ಬಿ.ಶಿವರಾಂ, ಎಂ.ಚೆಲುವರಾಯ ಸ್ವಾಮಿ, ಜಬ್ಬರ್‌ ಖಾನ್‌ ಹೊನ್ನಳ್ಳಿ, ಆರ್‌. ಶ್ರೀನಿವಾಸ್‌, ಭಾಗೀರಥಿ ಮರುಳಸಿದ್ಧಣ್ಣ ಗೌಡ, ಇಕ್ಬಾಲ್‌ ಅನ್ಸಾರಿ.

ರಾಜ್ಯ ಸಚಿವರಾಗಿ ಬಿ.ಸತ್ಯನಾರಾಯಣ್‌, ಸತೀಶ್‌ ಜಾರಕಿಹೊಳಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಹೊಸಬರ ದಂಡು : ಬಸವರಾಜ್‌ ಹೊರಹಟ್ಟಿ, ಸಿ.ಚನ್ನಿಗಪ್ಪ, ನಾಗಪ್ಪ, ಮಹದೇವಪ್ರಸಾದ್‌, ಅಂಜನ ಮೂರ್ತಿ, ಶಿವರಾಂ, ಚೆಲುವನಾರಾಯಣ ಸ್ವಾಮಿ, ಜಬ್ಬರ್‌ ಖಾನ್‌ ಹೊನ್ನಳ್ಳಿ, ಆರ್‌.ಶ್ರೀನಿವಾಸ್‌, ಭಾಗೀರಥಿ ಮರುಳಸಿದ್ಧನಗೌಡ, ಇಕ್ಬಾಲ್‌ ಅನ್ಸಾರಿ, ಸತೀಶ್‌ ಜಾರಕಿಹೊಳಿ ಸೇರಿದಂತೆ ಹನ್ನೆರಡು ಮಂದಿ ಶಾಸಕರಿಗೆ ಮೊದಲ ಸಲ ಸಚಿವ ಸ್ಥಾನದ ಸಂಭ್ರಮ ದಕ್ಕಿದೆ.

ಪ್ರಹಸನ : ಪರಸ್ಪರ ಎಣ್ಣೆ-ಸೀಗೆಕಾಯಿಯಂತಿದ್ದ ಕಾಂಗ್ರೆಸ್‌-ಜೆಡಿಎಸ್‌ಗಳು ಅಧಿಕಾರಕ್ಕಾಗಿ ಮೈತ್ರಿ ಮಾಡಿಕೊಂಡು, ಸಮ್ಮಿಶ್ರ ಸರಕಾರದ ಕಸರತ್ತಿಗೆ ಮುಂದಾಗಿದ್ದವು. ಸರಕಾರ ಅಸ್ತಿತ್ವಕ್ಕೆ ಬಂದ ಆರು ತಿಂಗಳಿಂದ ಈವರೆಗೆ ಸಂಪುಟ ವಿಸ್ತರಣೆ ಕಗ್ಗಂಟಾಗಿತ್ತು.

ಪ್ರತಿದಿನ ಸಂಪುಟ ವಿಸ್ತರಣೆಯದೇ ಎಲ್ಲೆಡೆ ಮಾತು. ಪತ್ರಿಕೆಗಳಲ್ಲಿ ಹಾಗೂ ಟಿ.ವಿ.ಗಳಲ್ಲಿ ಈ ಬಗೆಗಿನ ಹೇಳಿಕೆಗಳನ್ನು ಕಂಡು ಜಾಗತಿಕ ಕನ್ನಡಿಗರು ಜಿಗುಪ್ಸೆಗೊಂಡಿದ್ದರು. ಧರ್ಮಸಿಂಗ್‌ ಮಂತ್ರಿ ಮಂಡಲ ವಿಸ್ತರಣೆಯ ದಿನಾಂಕಗಳನ್ನು ಹೇಳುತ್ತಲೇ ಬಂದರು. ಕಡೆಗೆ ಅವರ ಮಾತಿನ ಮೇಲೆ ವಿಶ್ವಾಸವೇ ಇಲ್ಲದಂತಾಯಿತು. ಸಂಪುಟ ವಿಸ್ತರಣೆಗಾಗಿ ಸೋನಿಯಾ ಮೇಡಂ ಆಶೀರ್ವಾದ ಬೇಡಲು ಸಾಕಷ್ಟು ಸಲ ಧರ್ಮಸಿಂಗ್‌ ದೆಹಲಿಗೆ ತೆರಳಿ ಬರಿಗೈಯಲ್ಲಿ ಮರಳಿದ್ದರು.

ಜೆಡಿಎಸ್‌ ವಲಯದಲ್ಲಂತೂ ಸಂಪುಟ ವಿಸ್ತರಣೆಗೆ ನಾನಾ ಒತ್ತಡಗಳು, ಕಸರತ್ತುಗಳು ನಡೆದಿದ್ದವು. ರಹಸ್ಯ ಸಭೆ ನಡೆಸಿದ ಜೆಡಿಎಸ್‌ ಶಾಸಕರು ಡಿ.15 ರ ಗಡುವು ನೀಡಿದ್ದರು. ಧರ್ಮಸಿಂಗ್‌ ಸ್ಪಂದಿಸದಿದ್ದರೇ, ನಮ್ಮ ದಾರಿ ನಮ್ಮದು ಎನ್ನುವ ಮಾತು ಜೆಡಿಎಸ್‌ ಕಾರ್ಯಾಧ್ಯಕ್ಷ ಕುಮಾರಸ್ವಾಮಿಯಿಂದ ಕೇಳಿ ಬಂದಿತ್ತು. ನಮ್ಮ ಜೊತೆ ಸೇರಿ ಎಂದು ಬಿಜೆಪಿ, ಜೆಡಿಎಸ್‌ಗೆ ಬಹಿರಂಗವಾಗಿಯೇ ಆಹ್ವಾನ ನೀಡಿತ್ತು.

ದೇವೇಗೌಡ, ಸೋನಿಯಾ, ಧರ್ಮಸಿಂಗ್‌- ಹೀಗೆ ತ್ರಿಕೋನ ಮಾತುಕತೆಗಳು ಪ್ರಹಸನದಂತೆ ರಾಜ್ಯದ ಜನರಿಗೆ ಮನರಂಜನೆಗೆ ಗ್ರಾಸವಾಗಿತ್ತು. ಮೊನ್ನೆ ದೆಹಲಿಗೆ ಹೋದ ಧರ್ಮಸಿಂಗ್‌ಗೆ, ಸಂಪುಟ ವಿಸ್ತರಣೆ ಎಲ್ಲಾ ಬಿಟ್ಟು, ಐಟಿ ದೊರೆಗಳ ಸಮಸ್ಯೆಗಳಿಗೆ ಸ್ಪಂದಿಸಿ ಎಂದು ಸೋನಿಯಾ ಮೇಡಂ ಗದರಿಸಿದ್ದರು. ಜೆಡಿಎಸ್‌ನ ಬಿಗಿಪಟ್ಟಿಗೆ ತುಸು ಬೆದರಿದ ಸೋನಿಯಾ ಮೇಡಂ, ಸಂಪುಟಕ್ಕೆ ಅಸ್ತು ಎಂದಿದ್ದಾರೆ.

ಖಾತೆ-ಕ್ಯಾತೆ : ಅಧಿಕಾರದ ದಾಹ, ಆ ಖಾತೆ ನನಗೆ ಬೇಕು ಎನ್ನುವ ಹಠ-ಪ್ರತಿಷ್ಠೆಗಳ ಪರಿಣಾಮ ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳಿಗೆ ಧರ್ಮ ಸಂಕಟ ತಂದಿತ್ತು. ಕಳಂಕಿತರ ದೂರವಿಡಿ ಎನ್ನುವ ಮೂಲಕ ದೇವೇಗೌಡರ ಎದುರಾಳಿ ಡಿ.ಕೆ.ಶಿವಕುಮಾರ್‌ಗೆ ಮಂತ್ರಿಗಿರಿ ದಕ್ಕದಂತೆ ಜೆಡಿಎಸ್‌ ಪಟ್ಟು ಹಿಡಿದಿತ್ತು.

ಕೇಂದ್ರ ರೇಷ್ಮೆ ಮಂಡಳಿಯ ಅಧ್ಯಕ್ಷಗಿರಿ ನೀಡಿ ಡಿ.ಕೆ. ಶಿ ಅವರನ್ನು ಸಮಾಧಾನ ಮಾಡುವ ಹೈಕಮಾಂಡ್‌ ನಿರ್ಧಾರ ಫಲ ನೀಡಲಿಲ್ಲ. ಖಾತೆ ಸಿಗದವರ ಕ್ಯಾತೆ ಈಗ ಆರಂಭವಾಗುತ್ತದೆ. ಶಾಸಕರ ಅಸಮಧಾನ-ಅತೃಪ್ತಿಗಳನ್ನು ನಿಗಮ ಮಂಡಳಿ ಅಧ್ಯಕ್ಷ-ಉಪಾಧ್ಯಕ್ಷ ಸ್ಧಾನಗಳು ತುಸು ಶಮನಗೊಳಿಸ ಬಹುದು.

ಕಳೆದ ಆರು ತಿಂಗಳಿಂದ ಸಚಿವರಿಲ್ಲದೇ ಕೋಟ್ಯಾಂತರ ರೂಪಾಯಿ ಹಣ, ಸರಕಾರದ ಬೊಕ್ಕಸಕ್ಕೆ ಉಳಿತಾಯವಾಗಿದೆ. ಇನ್ನೊಂದು ಕಡೆ ಕಡತಗಳು ಸದ್ದಿಲ್ಲದೇ ಕೊಳೆಯುತ್ತಿವೆ.

(ಇನ್ಫೋ ವಾರ್ತೆ)

ಮುಖಪುಟ / ಧರ್ಮ-ಕಾರಣ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+