ಕಾರಿಡಾರ್ ಯೋಜನೆ ಬಗ್ಗೆ ವಿಮರ್ಶೆ, ತಪ್ಪಿತಸ್ಥರಿಗೆ ಶಿಕ್ಷೆ-ಧರ್ಮಸಿಂಗ್
ಬೆಂಗಳೂರು : ವಿವಾದಕ್ಕೆ ಕಾರಣವಾಗಿರುವ ಬೆಂಗಳೂರು-ಮೈಸೂರು ಅಭಿವೃದ್ಧಿ ಕಾರಿಡಾರ್ ಯೋಜನೆಯ ಬಗ್ಗೆ ಪರಿಶೀಲನೆ ನಡೆಸುವ ಮೂಲಕ ಸತ್ಯಾಸತ್ಯಗಳ ಒರೆಹಚ್ಚುವುದಾಗಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ತಿಳಿಸಿದ್ದಾರೆ.
ಪರಿಶೀಲನೆಯ ಮೊದಲ ಹಂತವಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕಚೇರಿಗೆ ಅಚಾನಕ್ ಭೇಟಿ ನೀಡಲಾಗುವುದು. ಕಾರಿಡಾರ್ ಯೋಜನೆಯ ಬಗ್ಗೆ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸುವವರೆಗೆ ಯಾವುದೇ ಟೌನ್‌ಷಿಪ್ ಯೋಜನೆ ಕೈಗೊಳ್ಳದಂತೆ ನಂದಿ ನಂದಿ ಕಾರಿಡಾರ್ ಸಂಸ್ಥೆಗೆ ಸೂಚಿಸಲಾಗುವುದು ಎಂದು ಮಂಗಳವಾರ ಸುದ್ದಿಗಾರರಿಗೆ ಮುಖ್ಯಮಂತ್ರಿ ಧರ್ಮಸಿಂಗ್ ತಿಳಿಸಿದರು.
ಪರಿಶೀಲನೆಯ ಸಂದರ್ಭದಲ್ಲಿ ಅವ್ಯವಹಾರಗಳು ಬೆಳಕಿಗೆ ಬಂದರೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಧರ್ಮಸಿಂಗ್ ಹೇಳಿದರು. ಪರಿಶೀಲನೆ ಎಂದರೇನು ಎನ್ನುವ ಸುದ್ದಿಗಾರರ ಕೆಣಕು ಪ್ರಶ್ನೆಗೆ ಹಾರಿಕೆ ಉತ್ತರ ನೀಡಿದ ಮುಖ್ಯಮಂತ್ರಿ- 1997ರಲ್ಲಿ ಯೋಜನೆಯ ಒಪ್ಪಂದಕ್ಕೆ ಅಂಕಿತ ಹಾಕಲಾಗಿದೆ. ಒಂದು ವೇಳೆ ಅವ್ಯವಹಾರದ ವಾಸನೆ ಕಂಡುಬಂದಲ್ಲಿ ಯೋಜನೆಯನ್ನು ರದ್ದುಪಡಿಸುವ ಸಾಧಕ ಬಾಧಕಗಳ ಕುರಿತು ಚಿಂತಿಸಲಾಗುವುದು ಎಂದರು.
ಕಾರಿಡಾರ್ ಯೋಜನೆಯಲ್ಲಿ ಅನೇಕ ಅವ್ಯವಹಾರಗಳು ನಡೆದಿವೆ. ಈ ಅವ್ಯವಹಾರಗಳು ಎಸ್ಸೆಂ.ಕೃಷ್ಣರ ಅಧಿಕಾರಾವಧಿಯಲ್ಲಿ ನಡೆದಿವೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಆರೋಪಿಸಿದ್ದರು. ಈ ಸಂಬಂಧ ಧರ್ಮಸಿಂಗ್‌ಗೆ 2 ಪುಟಗಳ ಪತ್ರ ಬರೆದಿದ್ದ ದೇವೇಗೌಡ ಸಿಬಿಐ ತನಿಖೆಗೆ ಒತ್ತಾಯಿಸಿದ್ದರು. ಆದರೆ ದೇವೇಗೌಡರ ಆರೋಪಗಳನ್ನು ರಾಜಕೀಯ ಕುತಂತ್ರ ಎಂದು ತಳ್ಳಿಹಾಕಿರುವ ಮಾಜಿ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಗೌಡರ ವಿರುದ್ಧ ಪತ್ರ ಸಮರ ಸಾರಿದ್ದಾರೆ.(ಪಿಟಿಐ)