ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನುಕುಲದ ಮಹಾನ್‌ ಕ್ರೀಡಾಕೂಟ ಸಂಭ್ರಮದಲ್ಲಿ ಅಥೆನ್ಸ್‌ ನಗರಿ!

By Staff
|
Google Oneindia Kannada News

ಮನುಕುಲದ ಮಹಾನ್‌ ಕ್ರೀಡಾಕೂಟ ಸಂಭ್ರಮದಲ್ಲಿ ಅಥೆನ್ಸ್‌ ನಗರಿ!
ಬೃಹತ್‌ ದಂಡಿನ ಭಾರತಕ್ಕೆ ಕೆಲವು ಪದಕಗಳ ನಿರೀಕ್ಷೆ

ಬೆಂಗಳೂರು : ವಿಶ್ವದ ಅತಿದೊಡ್ಡ ಕ್ರೀಡಾ ಹಬ್ಬ ಒಲಿಂಪಿಕ್ಸ್‌-2004ಕ್ಕೆ ಅಥೆನ್ಸ್‌ ನಗರಿ ಸಜ್ಜುಗೊಂಡಿದ್ದು , ಆ.13ರ ಶುಕ್ರವಾರ ರಾತ್ರಿ8.45 ಗಂಟೆಗೆ (ಭಾರತೀಯ ಕಾಲಮಾನ ರಾತ್ರಿ 11.15) ಮಹಾನ್‌ ಕ್ರೀಡಾಕೂಟದ ಉದ್ಘಾಟನೆ ನಡೆಯಲಿದೆ.

ಒಲಿಂಪಿಕ್‌ ಆಟೋಟಗಳ ತವರು ಗ್ರೀಸ್‌ನಲ್ಲಿ ಈ ಬಾರಿಯ ಕ್ರೀಡಾಕೂಟ ನಡೆಯುತ್ತಿದ್ದು , ಐತಿಹಾಸಿಕ ನಗರಿ ಅಥೆನ್ಸ್‌ ಜಾಗತಿಕ ಸ್ಪರ್ಧೆಗಳ ಆತಿಥ್ಯ ವಹಿಸಿರುವುದು ವಿಶೇಷ. ಆ. 13ರಂದು ಪ್ರಾರಂಭವಾಗುವ ಈ ಕ್ರೀಡಾಕೂಟ 29 ದಿನಗಳ ಕಾಲ ನಡೆಯಲಿದೆ.

ಉದ್ದ ಜಿಗಿತ ಪಟು ಅಂಜು ಬಾಬ್ಬಿ ಜಾರ್ಜ್‌ ಅಥೆನ್ಸ್‌ ಒಲಿಂಪಿಕ್ಸ್‌ ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರಧ್ವಜ ಹಿಡಿದು ಪಥಸಂಚಲನದಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಈ ಕ್ರೀಡೋತ್ಸವದಲ್ಲಿ 199 ದೇಶಗಳ 10,500 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.

301ಸ್ಪರ್ಧೆಗಳಲ್ಲಿ ಚಿನ್ನ ಗಳಿಸಲು ಸೆಣಸಾಟ ನಡೆಯಲಿದೆ. ಕ್ರೀಡೆಗಳನ್ನು ನಡೆಸುವ ವೆಚ್ಚ 734 ಕೋಟಿ ಡಾಲರ್‌ಗಳು. ಇದರಲ್ಲಿ ಭದ್ರತಾ ವೆಚ್ಚವೇ 100ಕೋಟಿ ಡಾಲರ್‌ ಎಂದು ಅಂದಾಜು ಮಾಡಲಾಗಿದೆ. ಈ ಅಥೆನ್ಸ್‌ ಕೂಟದಲ್ಲಿ ಭಾರತವು ತನ್ನ ಬೃಹತ್‌ ದಂಡಿನೊಂದಿಗೆ ಭಾಗವಹಿಸಿದೆ.

ಭಾರತದ ಭರವಸೆ : ಸುಮಾರು 104ವರ್ಷಗಳ ಇತಿಹಾಸ ಹೊಂದಿರುವ ಒಲಿಂಪಿಕ್ಸ್‌ನಲ್ಲಿ ಭಾರತದ ಸಾಧನೆ ಹೇಳಿಕೊಳ್ಳುವಂತದ್ದಲ್ಲ. ಈವರೆಗೆ ಹಾಕಿಯಲ್ಲಿ ಎಂಟು ಚಿನ್ನದ ಪದಕಗಳು ದಕ್ಕಿದ್ದರೆ, ಅಥ್ಲೆಟಿಕ್ಸ್‌ನಲ್ಲಿ ಇದುವರೆಗೆ ಪದಕ ಸಿಕ್ಕಿಲ್ಲ.

ಕಳೆದ ವರ್ಷ ಪ್ಯಾರಿಸ್‌ನಲ್ಲಿ ನಡೆದ ವಿಶ್ವ ಚಾಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆಲ್ಲುವ ಸಾಧನೆ ಮಾಡಿರುವ ಅಂಜು ಜಾರ್ಜ್‌ ಪ್ರಸಕ್ತ ಕ್ರೀಡಾಕೂಟದಲ್ಲಿ ಪದಕದ ಭರವಸೆ ಮೂಡಿಸಿದ್ದಾರೆ. ಟೆನಿಸ್‌ನಲ್ಲಿ ಮಹೇಶ್‌ ಭೂಪತಿ ಮತ್ತು ಲಿಯಾಂಡರ್‌ ಪೇಸ್‌ ಜೋಡಿಯೂ ಪದಕದ ನಿರೀಕ್ಷೆ ಮೂಡಿಸಿದೆ. 2000ದ ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ವೇಟ್‌ಲಿಫ್ಟರ್‌ ಕರ್ಣಂ ಮಲ್ಲೇಶ್ವರಿ, ಬ್ಯಾಡ್ಮಿಂಟನ್‌ನಲ್ಲಿ ವಿಶ್ವದ 27ನೇ ಶ್ರೇಯಾಂಕಿತೆ ಕರ್ನಾಟಕದ ಅಪರ್ಣಾ ಪೊಪಟ್‌, ಸ್ಪರ್ಧಾಕಣದಲ್ಲೇ ಅತ್ಯಂತ ಹಿರಿಯ ಮಹಿಳಾ ಸ್ಪರ್ಧಿಯಾಗಿರುವ ವೇಟ್‌ಲಿಫ್ಟರ್‌ 36ರ ಕುಂಜುರಾಣಿ ದೇವಿ, ಶೂಟಿಂಗ್‌ನ ತಾರೆ ಅಂಜಲಿ ಭಾಗವತ್‌ ಕೂಡ ಪದಕದ ಮೇಲೆ ಕಣ್ಣಿಟ್ಟಿದ್ದಾರೆ.

ಅಥೆನ್ಸ್‌ನಲ್ಲಿ ಜನಗಣ ಮನ ಮೊಳಗಲಿ ಎಂದು ಹಾರೈಸುವ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X