ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಡ್ಯಕ್ಕೆ ಬೆಣ್ಣೆ ಮೈಸೂರಿಗೆ ಸುಣ್ಣ ; ಕೃಷ್ಣ ವಿರುದ್ಧ ರೈತರ ಆಕ್ರೋಶ

By Staff
|
Google Oneindia Kannada News

ಮಂಡ್ಯಕ್ಕೆ ಬೆಣ್ಣೆ ಮೈಸೂರಿಗೆ ಸುಣ್ಣ ; ಕೃಷ್ಣ ವಿರುದ್ಧ ರೈತರ ಆಕ್ರೋಶ
ಬೆಳೆ ನಷ್ಟಕ್ಕೆ ಪರಿಹಾರ ನೀಡಲು ಒತ್ತಾಯಿಸಿ ಎತ್ತಿನಗಾಡಿ ಪ್ರತಿಭಟನೆ

ಮೈಸೂರು : ಪುನಶ್ಚೇತನ ಭಾರತದಲ್ಲಿ ಚೈತನ್ಯಶೀಲ ಕರ್ನಾಟಕ ಹೆಮ್ಮೆಯ ಪಾಲನ್ನು ಹೊಂದಿದೆ ಎಂದು ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ರಾಜ್ಯ ವಿಧಾನಸಭೆಯಲ್ಲಿ ಘೋಷಿಸುತ್ತಿರುವ ಸಂದರ್ಭದಲ್ಲಿಯೇ- ರಾಜ್ಯ ಸರ್ಕಾರದ ವಿರುದ್ಧ ಮೈಸೂರು ಜಿಲ್ಲೆಯ ಲಕ್ಷ್ಮಿಪುರ ಹಾಗೂ ಆಸುಪಾಸಿನ ಗ್ರಾಮಗಳ ರೈತರು ಪ್ರತಿಭಟನೆ ನಡೆಸಿದರು.

ಬೆಳೆನಷ್ಟಕ್ಕೆ ಪರಿಹಾರ ನೀಡಬೇಕೆಂದು ಒತ್ತಾಯಿಸಿ- ಫೆ.5ರ ಗುರುವಾರ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ರೈತರು ಎತ್ತಿನ ಗಾಡಿ ಪ್ರತಿಭಟನೆ ನಡೆಸಿದರು.

ಬರದಿಂದಾಗಿ ಬೆಳೆ ಕೈಗೆ ಹತ್ತುತ್ತಿಲ್ಲ . ಇದೇ ವೇಳೆಯಲ್ಲಿ ಕೃಷಿ ಕಾರ್ಯಗಳಿಗಾಗಿ ಸರ್ಕಾರ ನೀರು ಬಿಡುಗಡೆ ಮಾಡುತ್ತಿಲ್ಲ . ಬೋರ್‌ವೆಲ್‌ಗಳಿಂದ ನೀರು ಹಾಯಿಸೋಣವೆಂದರೆ ವಿದ್ಯುತ್ತಿಗೂ ಖೋತಾ ಎಂದು ಪ್ರತಿಭಟನೆ ನಡೆಸಿದ ರೈತರು ದೂರಿದರು. ಕಬ್ಬಿನ ಹೊಲಗಳೆಲ್ಲ ಒಣಗಿ ಹೋಗಿರುವುದರಿಂದ ಬ್ಯಾಂಕುಗಳಿಂದ ಪಡೆದಿರುವ ಕೃಷಿ ಸಾಲಗಳನ್ನು ವಾಪಸ್ಸು ಮಾಡಲೂ ಸಾಧ್ಯವಾಗುತ್ತಿಲ್ಲ ಎಂದು ರೈತರು ಅಲವತ್ತುಕೊಂಡರು.

ತಮಿಳುನಾಡಿನ ರೈತರ ಬೆಳೆಗಳಿಗೆ ರಾಜ್ಯ ಸರ್ಕಾರ ನೀರು ಒದಗಿಸುತ್ತಿದೆ. ಆದರೆ, ರಾಜ್ಯದ ರೈತರ ಬೆಳೆಗಳಿಗೆ ನೀರು ನೀಡಲು ರಾಜ್ಯ ಸರ್ಕಾರ ವಿಫಲವಾಗುತ್ತಿದೆ ಎಂದು ರೈತ ಮುಖಂಡರು ಮಾರ್ಮಿಕವಾಗಿ ನುಡಿದರು. ಮಂಡ್ಯ ಜಿಲ್ಲೆಯ ರೈತರ ಬೆಳೆ ನಷ್ಟವನ್ನು ತುಂಬಲು ಸರ್ಕಾರ 58 ಕೋಟಿ ರುಪಾಯಿಗಳನ್ನು ಬಿಡುಗಡೆ ಮಾಡಿದೆ. ಆದರೆ, ಮೈಸೂರು ಜಿಲ್ಲೆಯ ರೈತರು ಸರ್ಕಾರದ ಮಲತಾಯಿ ಧೋರಣೆಗೆ ಗುರಿಯಾಗಿದ್ದಾರೆ ಎಂದು ರೈತರು ಆಪಾದಿಸಿದರು.

ಹೆದ್ದಾರಿಯಲ್ಲಿ ರೈತರ ಎತ್ತಿನಗಾಡಿಗಳು ಠಿಕಾಣಿ ಹೂಡಿದ್ದರಿಂದಾಗಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು . ಸರ್ಕಾರ ಪರಿಹಾರ ನೀಡದಿದ್ದಲ್ಲಿ ಚಳವಳಿಯನ್ನು ಮುಂದಿನ ದಿನಗಳಲ್ಲಿ ತೀವ್ರಗೊಳಿಸುವುದಾಗಿ ರೈತರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X