ಉಡುಪಿ ಪರ್ಯಾಯದಲ್ಲಿ ತೇಜಸ್ವಿ ವಿರುದ್ಧ ಪೇಜಾರಶ್ರೀ ಅಪಸ್ವರ
ಉಡುಪಿ : ವಿಶ್ವ ಪ್ರಸಿದ್ಧ ಉಡುಪಿಯ ಕೃಷ್ಣಮಠದಲ್ಲಿ ನಡೆದ ಪರ್ಯಾಯ ಮಹೋತ್ಸವದಲ್ಲಿ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಅವರು ಶ್ರೀಕೃಷ್ಣ ಮಠದ ಅಧಿಕಾರ ಸ್ವೀಕರಿಸಿದರು. ಇದರೊಂದಿಗೆ ಎರಡು ವರ್ಷಗಳ ಕಾಲ ಶ್ರೀಕೃಷ್ಣನನ್ನು ಪೂಜಿಸುವ ಅವಕಾಶ ಸ್ವಾಮೀಜಿ ಅವರಿಗೆ ದೊರೆತಂತಾಗಿದೆ.
47 ವರ್ಷ ವಯಸ್ಸಿನ ಅದಮಾರು ಮಠಾಧೀಶರು ಪರ್ಯಾಯ ಪೀಠ ಆರೋಹಿಸಿದ (ಜ.18, ಭಾನುವಾರ) ನಂತರ- ಮುಂದಿನ ಎರಡು ವರ್ಷಗಳ ಕಾಲ ಕೃಷ್ಣಮಠದ ಆಡಳಿತ ಹಾಗೂ ಕೃಷ್ಣನ ಪೂಜೆ ನಡೆಸುವರು. ಕಳೆದೆರಡು ಪರ್ಯಾಯಗಳ ಅವಧಿಯಲ್ಲಿ ಪೇಜಾವರ ಮತ್ತು ಫಲಿಮಾರು ಮಠಾಧೀಶರು ಹಾಕಿಕೊಟ್ಟ ಪರಿಮಳದ ಪಂಕ್ತಿಯಲ್ಲಿ ತಾವು ಸಾಗುವುದಾಗಿ ಪೀಠಾರೋಹಣದ ನಂತರ ಅದಮಾರು ಮಠಾಧೀಶರು ಹೇಳಿದರು.
ಸಾವಿರಾರು ಭಕ್ತರು ಜಮಾಯಿಸಿದ್ದ ಪರ್ಯಾಯ ಮಹೋತ್ಸವ ವೈಭವದಿಂದ ನಡೆಯಿತು. ಶನಿವಾರ ಮಧ್ಯರಾತ್ರಿಯಿಂದಲೇ ಪೂಜಾ ಕಾರ್ಯಕ್ರಮಗಳು ಆರಂಭವಾಗಿದ್ದವು.
ಮಧ್ವರ ಕುರಿತು ಅಪಸ್ವರ : ಪರ್ಯಾಯ ಕಾರ್ಯಕ್ರಮದಲ್ಲಿ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಭಾಗವಹಿಸಿದ್ದರು. ನಾಡಗೀತೆಯ ವಿವಾದವನ್ನು ಪ್ರಸ್ತಾಪಿಸಿದ ವಿಶ್ವೇಶತೀರ್ಥರು- ಜಾತ್ಯತೀತರು ಎಂದುಕೊಳ್ಳುತ್ತಿರುವ ಕೆಲವು ಮಂದಿ ಹಾಗೂ ಬುದ್ಧಿಜೀವಿಗಳ ಹೆಸರಿನ ಕೆಲವರು ವಿನಾ ಕಾರಣ ವಿವಾದವನ್ನು ಸೃಷ್ಟಿಸಿ ಹಿಂದೂ ಧರ್ಮವನ್ನು ದುರ್ಬಲಗೊಳಿಸಲು ಹೊರಟಿದ್ದಾರೆ ಎಂದು ಆಪಾದಿಸಿದರು.
ಮಹಾನ್ ಮಾನವತಾವಾದಿ ಮಧ್ವರನ್ನು ಈ ನಾಡಿನ ಖ್ಯಾತ ಸಾಹಿತಿಯಾಬ್ಬರು ತಪ್ಪಾಗಿ ಅರ್ಥೈಸುತ್ತಿದ್ದಾರೆ ಎಂದು ವಿಶ್ವೇಶತೀರ್ಥ ಸ್ವಾಮೀಜಿ ವಿಷಾದಿಸಿದರು.












Click it and Unblock the Notifications